Saturday 16 April 2011

ಸಂಸ್ಕೃತಿ ಪ್ರಜ್ಞೆ, ಪ್ರೀತಿ ಬದ್ಧತೆ ಇದ್ದರೆ ಮಾತ್ರ ರಂಗಸಂಸ್ಕೃತಿ ಬೆಳೆಯುತ್ತದೆ : ನಾಗತಿಹಳ್ಳಿ

 ಮುದ್ರಾಡಿ : ಸಂಸ್ಕೃತಿಯ ಶ್ರೇಷ್ಠತೆಯ ತರತಮ ಜ್ಞಾನವನ್ನೇ ಕಳೆದುಕೊಂಡಿರುವ ಆಧುನಿಕ ಲೋಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರಂಗಸಂಸ್ಕೃತಿ ಕಟ್ಟುವ ಕೆಲಸ ಭಾರಿ ಸವಾಲಿನದು. ಇದಕ್ಕೆ ನೆಲದ ಸಂಸ್ಕೃತಿ ಪ್ರಜ್ಞೆ, ಪ್ರೀತಿ ಬದ್ಧತೆ ಇದ್ದರೆ ಮಾತ್ರ ಸಾಧ್ಯ. ಮುದ್ರಾಡಿಯಂಥಹ ಪುಟ್ಟಗ್ರಾಮದಲ್ಲಿ ಇದು ಸಾಧ್ಯವಾಗಿದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಹೇಳಿದರು. ಅವರು ಹೆಬ್ರಿ ಮುದ್ರಾಡಿಯ ನಮ್ಮ ತುಳುವೆರ್ ಕಲಾ ಸಂಘಟನೆ (ರಿ)ತನ್ನ ರಜತಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ನವರಂಗೋತ್ಸವ ಹತ್ತು ದಿನಗಳ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಪುಟ್ಟ ಹಳ್ಳಿಯೊಂದರಲ್ಲಿ ಕುಳಿತು ಜಗತ್ತನ್ನು ನೋಡುವುದು ಹಾಗೇ ಜಗತ್ತೆಲ್ಲಾ ಹಳ್ಳಿ ಕಡೆ ಹೊರಳಿ ನೋಡುವುದು ಇಂತಹ ಸಂಸ್ಕೃತಿ ಕಟ್ಟುವ ಕೆಲಸದಿಂದ ಸಾಧ್ಯವಾಗುತ್ತದೆ. ಮುದ್ರಾಡಿಯನ್ನು ಜಗತ್ತು ಈ ದೃಷ್ಟಿಯಿಂದ ಗಮನಿಸುತ್ತಿದೆ. ಇಂಥಹ ಹತ್ತಾರು ಮುದ್ರಾಡಿಗಳು ಹುಟ್ಟಿಕೊಳ್ಳಲಿ ರಂಗೋತ್ಸವ ನಿತ್ಯೋತ್ಸವವಾಗಲಿ ಎಂದು ಹಾರೈಸಿದರು. ಸಾಹಿತಿ ಬೆಳಗಾವಿಯ ಪ್ರೊ ಡಿ ಕೆ ಚೌಗುಲೆ ಮಾತನಾಡಿ ಕರಾವಳಿ ಸಂಸ್ಕೃತಿ ಇಲ್ಲಿಯ ಯಕ್ಷಗಾನ, ತುಳುಜಾನಪದಗಳಿಂದ ಶ್ರೀಮಂತವಾಗಿದೆ. ಮರಾಠಿ ಸಂಸ್ಕೃತಿಯ ಮೇಲೆ ಯಕ್ಷಗಾನದ ಪ್ರಭಾವ ಇದೆ. ಪರಸ್ಪರ ಆದಾನ ಪ್ರದಾನಗಳಿಂದ ಸಂಸ್ಕೃತಿಯ ಜೀವಂತಿಕೆ ಸಾಧ್ಯವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತುಳು ಸಾಹಿತಿ ಡಿ ಕೆ ಚೌಟ ವಹಿಸಿದ್ದರು. ರಂಗಕರ್ಮಿ ನಾ ದಾಮೋದರ ಶೆಟ್ಟಿ, ದುಬೈಯ ಉದ್ಯಮಿ ಹರೀಶ ಸೇರಿಗಾರ್, ನಮ್ಮ ತುಳುವೆರ್ ಕಲಾ ಸಂಘಟನೆ (ರಿ) ಗೌರವಾಧ್ಯಕ್ಷ ಧರ್ಮಯೋಗಿ ಮೋಹನ್ ಉಪಸ್ಥಿತರಿದ್ದರು. ಸುರೇಂದ್ರ ಮೋಹನ್ ಸ್ವಾಗತಿಸಿದರು. ಸುಕುಮಾರ್ ಮೋಹನ್ ವಂದಿಸಿದರು. ಉದ್ಯಾವರ ನಾಗೇಶ ಕುಮಾರ್ ನಿರೂಪಿಸಿದರು.

No comments:

Post a Comment