Monday, 11 April 2011

ರಾಷ್ಟ್ರೀಯ ನಾಟಕೋತ್ಸವ ಸಂಭ್ರಮ!!!



dharmayogi mohan



            ನಮತುಳುವೆರ್ ಕಲಾಸಂಘಟನೆ(ರಿ) ಮುದ್ರಾಡಿ
sukumar mohan
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲೊಂದು ಸಣ್ಣ ಗ್ರಾಮ ಮುದ್ರಾಡಿ. ಆದರೆ ರಂಗಚಟುವಟಿಕೆಯ ದೃಷ್ಟಿಯಿಂದ ರಾಷ್ಟ್ರೀಯ ಮಾತ್ರವಲ್ಲ ಅಂತರಾಷ್ಟ್ರೀಯ ನಕ್ಷೆಯಲ್ಲೂ ತನ್ನ ಗುರುತುಮೂಡಿಸಿರುವ ಗ್ರಾಮ ಮುದ್ರಾಡಿ. ಇದಕ್ಕೆ ಕಾರಣ, 25 ವರ್ಷಗಳಿಂದ ಅವಿರತವಾಗಿ ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡು ಸುಮಾರು 60ಕ್ಕೂ ಹೆಚ್ಚು ನಾಟಕಗಳ 1500ಕ್ಕಿಂತಲೂ ಮಿಕ್ಕಿ ಪ್ರದರ್ಶನಗಳನ್ನು ನೀಡಿರುವ ಸಂಸ್ಥೆ ನಮತುಳುವೆರ್ ಕಲಾಸಂಘಟನೆಮುದ್ರಾಡಿ. ಈ ಸಾಂಸ್ಕೃತಿಕ ಸಂಸ್ಥೆಯ ಬೆನ್ನೆಲುಬಾಗಿರುವ ಇಲ್ಲಿನ ಶ್ರೀ ಆದಿಶಕ್ತಿ ದೇವಸ್ಥಾನ, ಹಾಗೂ ಧರ್ಮಯೋಗಿ ಶ್ರೀ ಮೋಹನ್, ಧಾರ್ಮಿಕ ಹಬ್ಬಗಳನ್ನು, ನಾಟಕೋತ್ಸವಗಳನ್ನಾಗಿಸಿ, ರಂಗಭೂಮಿಯ ಬೆಳವಣಿಗೆಗೆ ನೀಡಿರುವ ಕೊಡುಗೆ ಅನನ್ಯ. ನಾಟ್ಕ ಮುದ್ರಾಡಿಎಂದೇ ಗುರುತಿಸಿಕೊಂಡಿರುವ ನಮತುಳುವೆರ್ ಕಲಾಸಂಘಟನೆಯ ಅಧ್ಯಕ್ಷರು ಶ್ರೀ ಸುಕುಮಾರ್ ಮೋಹನ್. ಕೆಚ್ಚೆದೆಯಿಂದ ಗ್ರಾಮೀಣ ಮಟ್ಟದ ತಂಡವನ್ನು ಕಟ್ಟಿಕೊಂಡು ನಟನಾಗಿ, ನಿರ್ದೇಶಕನಾಗಿ ಹಾಗೂ ಸಂಘಟಕನಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಸುಕುಮಾರ್ ಮೋಹನ್‌ರಿಗೆ ಅನೇಕ ಗೌರವಗಳು ಸಂದಿವೆ.
ಅವುಗಳಲ್ಲಿ ಹೆಮ್ಮೆಯ ಪ್ರಶಸ್ತಿಗಳೆಂದರೆ ಕರ್ನಾಟಕ ನಾಟಕ ಅಕಾಡೆಮಿಯ ಸಿ.ಜಿ.ಕೆ. ಯುವರಂಗ ಪ್ರಶಸ್ತಿ ಹಾಗೂ ಪ್ರಸ್ತುತ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯತ್ವ. ಸದಾ ಕ್ರಿಯಾಶೀಲವಾಗಿರುವ ನಾಟ್ಕ ಮುದ್ರಾಡಿನಡೆದುಬಂದ ಹೆಜ್ಜೆಗಳು ಗಮನಾರ್ಹ.

ಕೃಷ್ಣಮೂರ್ತಿ ಕವತ್ತಾರ್, ಬಾಸುಮ ಕೊಡಗು, ಜಿ. ಸೀತಾರಾಮ ಶೆಟ್ಟಿ ಕೂರಾಡಿ, ಜೀವನ್‌ರಾಂ ಸುಳ್ಯ, ಪ್ರಮೋದ್ ಶಿಗ್ಗಾಂ, ಉದ್ಯಾವರ ನಾಗೇಶ್ ಕುಮಾರ್, ಸಿ. ಬಸವಲಿಂಗಯ್ಯ, ಶೀನಾ ನಾಡೋಳಿ, ಗುರುರಾಜ ಮಾರ್ಪಳ್ಳಿ,, ದಾಕ್ಷಾಯಣಿ ಭಟ್, ಮಲ್ಲಿಕಾರ್ಜುನ ಮಹಾಮನೆ, ಉದಯ್ ಸೋಸಲೆ, ಗೀತಾ ಸುಳ್ಯ ಮುಂತಾದ ರಂಗತಜ್ಞರಿಂದ ತರಬೇತಿ ಪಡೆದು, ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿರುವ ಈ ಸಂಸ್ಥೆಗೆ ಈಗ ಇಪ್ಪತ್ತೈದರ ಹರೆಯ. ಆರಂಭದ ದಿನಗಳಲ್ಲಿ ಮಾಮೂಲಿ ತುಳುನಾಟಕಗಳ ಮೂಲಕ ರಂಗದಲ್ಲಿ ಬಾಲ ಹೆಜ್ಜೆಯಿಟ್ಟ ಈ ಸಂಸ್ಥೆ, ಕೃಷ್ಣಮೂರ್ತಿ ಕವತ್ತಾರ್‌ರವರ ನಿರ್ದೇಶನದಲ್ಲಿ ಸಿರಿಸಂಪಿಗೆಯನ್ನು ಪ್ರದರ್ಶಿಸಿದಂದಿನಿಂದ ಹೊಸರೀತಿಯ ಕನ್ನಡ ಹಾಗೂ ತುಳು ನಾಟಕಗಳ ಜೈತ್ರಯಾತ್ರೆಯನ್ನು ಆರಂಭಿಸಿತು. ನಂತರದ ದಿನಗಳಲ್ಲಿ ಸಾಹೇಬರು ಬರುತ್ತಾರೆ, ಪಿಲಿಪತ್ತಿ ಗಡಸ್, ಧರ್ಮೆತ್ತಿ ಮಾಯೆ, ದೊಂಬೆರೆ ಚೆನ್ನಿ, ಕಾಳಾಪುರತ ಕಿಲೆಸಿಪಂಪನಿಗೆ ಬಿದ್ದ ಕನಸು, ಹುಲಿಯ ನೆರಳು, ಅಸುದ್ದೊ, ಒಂದು ಚೂರಿಯ ಕತೆ, ಮೀಡಿಯಾ, ದಂಗೆಯ ಮುಂಚಿನ ದಿನಗಳು, ನಲ್ಪೊದ ನಲಿಕೆ, ಹೂವು, ನಾ ತುಕಾರಾಮ ಅಲ್ಲ, ವಾಲಿ.......... ಹೀಗೆ ಸಾಗುತ್ತದೆ ಪ್ರದರ್ಶಿತ ನಾಟಕಗಳ ವಿವರ. ನಾಟ್ಕ ಮುದ್ರಾಡಿಯು ಕನ್ನಡ ಹಾಗೂ ತುಳು ರಂಗಭೂಮಿಯ ಬೆಳವಣಿಗೆಯೊಂದಿಗೆ ಸಾಗುವ ತನ್ನ ಛಾಪನ್ನು ಮೂಡಿಸುವ ಆಶಯವನ್ನು ಈ ವಿವರಗಳಲ್ಲಿ ಗಮನಿಸಬಹುದಲ್ಲವೇ? ನಾಟ್ಕತಂಡದ ಪಿಲಿ ಪತ್ತಿ ಗಡಸ್(ರಚನೆ: ಡಿ.ಕೆ. ಚೌಟ. ನಿ: ಜೀವನ್ ರಾಂ ಸುಳ್ಯ) 135ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವುದು, ತುಳು ಆಧುನಿಕ ರಂಗಭೂಮಿಯ ಇತಿಹಾಸದಲ್ಲೇ ದಾಖಲೆಯಾಗಬಲ್ಲುದಲ್ಲವೇ?

pilipatthi gadas
     ರಂಗಭೂಮಿಗೆ ಸಮಗ್ರ ಬದ್ಧತೆಯನ್ನು ಹೊಂದಿರುವ ನಾಟ್ಕ ಮುದ್ರಾಡಿ ಪ್ರದಶರ್ನ ಮಾತ್ರವಲ್ಲದೇ ವಿಚಾರ ಸಂಕೀರ್ಣಗಳನ್ನೂ, ರಂಗತರಬೇತಿ ಶಿಬಿರಗಳನ್ನೂ ಹಾಗೂ ರಂಗ ಸಾಧಕರಿಗೆ ಸಂಮಾನ ಕಾರ್ಯಕ್ರಮಗಳನ್ನು ಕೂಡ ನಿರಂತರವಾಗಿ ನಡೆಸಿಕೊಂಡು ಬಂದಿದೆ. ಇನ್ನೂ ಹೆಮ್ಮೆಯ ಸಂಗತಿಯೆಂದರೆ ಸಮಕಾಲೀನ ಸಮಸ್ಯೆಗಳಿಗೆ ತುಡಿಯುವ ಅನೇಕ ಬೀದಿನಾಟಕಗಳನ್ನು ರಾಜ್ಯಾದ್ಯಂತ ಚಳುವಳಿಯ ಮಾದರಿಯಲ್ಲಿ ಪ್ರದರ್ಶಿಸುತ್ತಿರುವುದು ಜನಜಾಗೃತಿ ಹಾಗೂ ಶೈಕ್ಷಣಿಕ ವಿಷಯಗಳಲ್ಲಿ ಈ ಸಂಸ್ಥೆಯು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ರಂಗಭೂಮಿಯಲ್ಲಿ ಕ್ರಿಯಾಶೀಲವಾಗುವುದೆಂದರೆ ಸಮುದಾಯದೊಂದಿಗೆ ತೆರೆದುಕೊಳ್ಳುವುದೆಂಬ ಬಾಲಪಾಠವನ್ನು ಜೀರ್ಣಿಸಿಕೊಂಡಿರುವ ಈ ಸಂಸ್ಥೆಯ ಎಲ್ಲ ಕಲಾವಿದರೂ, ತಾಂತ್ರಿಕವಾಗಿ, ನಟರಾಗಿ ರಂಗದ ಎಲ್ಲಾ ಕೆಲಸಗಳನ್ನು ನಿರ್ವಹಿಸುವಲ್ಲಿ ಶಕ್ತರಾಗಿ ಬೆಳೆಯುತ್ತಿದ್ದಾರೆ. ಒಂದೇ ಕುಟುಂಬದ ಐದು ಕಲಾವಿದರಾದ ಶ್ರೀ ಸುಕುಮಾರ್ ಮೋಹನ್, ಶ್ರೀ ಸುಧೀಂದ್ರ ಮೋಹನ್, ಶ್ರೀ ಸುರೇಂದ್ರ ಮೋಹನ್ ಮಾತ್ರವಲ್ಲದೇ ಕಿರುತೆರೆಯಲ್ಲೂ ಕಾಣಿಸಿಕೊಳ್ಳಲಿರುವ ಶ್ರೀಮತಿ ಸುಗಂಧಿ ಉಮೇಶ್ ಹಾಗೂ ಅವರ ಪತಿ ಶ್ರೀ ಉಮೇಶ್ ಕಲ್ಮಾಡಿ, ಮಾತ್ರವಲ್ಲದೇ ಶ್ರೀಮತಿ ಅಮಿತಾ ಹೆಗ್ಡೆ, ಶ್ರೀಮತಿ ಮಮತಾ, ಶ್ರೀ ಪ್ರಶಾಂತ್, ಶ್ರೀ ಕರುಣಾಕರ ಶಿವಪುರ, ಶ್ರೀ ಭರತ್ ಕುಮಾರ್, ಶ್ರೀ ಅನಿಲ್ ಕುಡ್ಲ ಶ್ರೀ ಗುರುರಾಜ ಆಚಾರ್ಯ, ಶ್ರೀ ನರೇಶ್, ಶ್ರೀ ಸುಧೀರ್, ಶಂಕರ್ ಭಟ್, ಚಂದ್ರಕಲಾ ಎಸ್ ಭಟ್, ಕುಮಾರ್
....... ಹೀಗೆ ನಾಟ್ಕ ಮುದ್ರಾಡಿ ತಂಡದ ಕಲಾವಿದರ ಕುಟುಂಬ ಬೆಳೆಯುತ್ತಿದೆ.
ವರ್ಕ್ಕೆ 12, ನವರಾತ್ರಿಗೆ 9, 20ಕ್ಕೆ 25 ಈಗ 25ಕ್ಕೆ ........
ರಾಷ್ಟ್ರೀಯ ನಾಟಕೋತ್ಸವ......

      ತಿಂಗಳ ತಿರುಳುಎನ್ನುವ ಕಾರ್ಯಕ್ರಮದ ಅಂಗವಾಗಿ ತನ್ನ ಹುಟ್ಟೂರಲ್ಲಿ ವರ್ಷವಿಡೀ ತಿಂಗಳಿಗೊಂದು ನಾಟಕವನ್ನು ಆಹ್ವಾನಿಸಿ ಪ್ರದರ್ಶಿಸುವ ನಾಟ್ಕ ಮುದ್ರಾಡಿನವರಾತ್ರಿಯ ಹರುಷದಲ್ಲಿ ಪ್ರತಿದಿನವೂ ಒಟ್ಟು ಒಂಬತ್ತು ರಂಗಪ್ರದರ್ಶನಗಳನ್ನು ನಡೆಸುತ್ತಾ ರಂಗ ಪ್ರೇಮಿಗಳಿಗೆ ಕಲಾವಿದರಿಗೆ ಆಪ್ತವಾಗುತ್ತಾ ಸಾಗಿ ಬಂದಿದೆ. ತನ್ನ ವಿಂಶತಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಯೋಜನೆಯಂತೆ, ಮುದ್ರಾಡಿಯಲ್ಲಿ ರಾಜ್ಯದ 20 ತಂಡಗಳ 25 ನಾಟಕಗಳನ್ನು 20 ದಿನಗಳಲ್ಲಿ ಪ್ರದರ್ಶಿಸಿ 20-20ಕ್ಕೆ ಹೊಸ ಅರ್ಥವನ್ನು ನೀಡುವಲ್ಲಿ ಸಫಲವಾಗಿದೆ. ಗ್ರಾಮೀಣ ಪರಿಸರದಲ್ಲಿ ಇಂತಹಾ ಸಾಹಸ ಕಾರ್ಯಕ್ಕೆ ಕೈಹಾಕಿ ಸೈ ಎನಿಸಿಕೊಂಡಿರುವ ನಾಟ್ಕ ಮುದ್ರಾಡಿ ತನ್ನ 25ರ ಸಂಭ್ರಮವನ್ನು ಹಂಚಿಕೊಳ್ಳಲು 9 ದಿನಗಳ ರಾಷ್ಟ್ರೀಯ ನಾಟಕೋತ್ಸವವನ್ನು ಆಯೋಜಿಸಿದೆ. ಫೆಬ್ರವರಿ 25ರಿಂದ ಮಾರ್ಚ್ 5ರ ವರೆಗೆ ರಾಷ್ಟ್ರೀಯ ನಾಟಕೋತ್ಸವ ಸಂಭ್ರಮ!!! 
*****

No comments:

Post a Comment