Friday, 22 April 2011

ಮುದ್ರಾಡಿ ಸುಕುಮಾರ್ ಮೋಹನ್ ರವರಿಗೆ ಯು.ಎ.ಇ. ಯಲ್ಲಿ ಸನ್ಮಾನ "ತೌಳವ ಕಲಾ ತಿಲಕ" ಬಿರುದು ನೀಡಿ ಗೌರವ ಸಮರ್ಪಣೆ

 ಕಾರ್ಕಳ ತಾಲೂಕಿನ ಮುದ್ರಾಡಿ ಗ್ರಾಮದಲ್ಲಿ ನಮತುಳುವೆರ್ ಕಲಾ ಸಂಘಟನೆಯ ಆಶ್ರಯದಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 5 ನೇ ತಾರೀಕಿನವರೆಗೆ ನಡೆದ ರಾಷ್ಟ್ರೀಯ ಮಟ್ಟದ ನಾಟಕೋತ್ಸವ " ರಂಗೋತ್ಸವ 2011" ಯಶಸ್ವಿಯಾಗಿ ನಡೆದು ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ. ಶ್ರಿ ಸುಕುಮಾರ್ ಮೋಹನ್ ರವರು ಕಳೆದ 25 ವರ್ಷಗಳಿಂದ ಕನ್ನಡ ತುಳು ಭಾಷೆ ಕಲೆ ಸಂಸ್ಕೃತಿಯನ್ನು ನಾಡಿನಾದ್ಯಂತ ನಾಟಕಗಳ ಮೂಲಕ ಜನ ಜಾಗೃತಿಯನ್ನು ಮೂಡಿಸಿದ ಸಾಧನೆಯನ್ನು ಮೆಚ್ಚಿ ಮಾರ್ಚ್ 21ನೇ ತಾರೀಕು ಸೋಮವಾರ ರಾತ್ರಿ 8.00 ಗಂಟೆಗೆ ಅಬುಧಾಬಿಯ ಹಮ್ದಾನ್ ಸ್ಟ್ರೀಟ್, ಅರಬ್ ಉಡುಪಿ ರೆಸ್ಟೋರೆಂಟ್ ಸಭಾಂಗಣದಲ್ಲಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಸಮಸ್ತ ಕಲಾಭಿಮಾನಿಗಳ ಪರವಾಗಿ ಅರಬ್ ಉಡುಪಿ ರೆಸ್ಟೊರೆಂಟ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶೇಖರ್ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಕುಶಾಲ ಶೇಕರ್ ಶೆಟ್ಟಿಯವರು, ಸುಕುಮಾರ್ ಮೋಹನ್ ರವರನ್ನು ಅಭಿನಂದಿಸುತ್ತಾ ಶಾಲು ಹೊದಿಸಿ ಫಲ ಪುಷ್ಪವನ್ನು, ಸ್ಮರಣಿಕೆಯೊಂದಿಗೆ "ತೌಳವ ಕಲಾ ತಿಲಕ" ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿದ ಶ್ರೀ ಸುಕುಮಾರ್ ಮೋಹನ್ ರವರು ಯು.ಎ.ಇ. ಯ ಕಲಾಭಿಮಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ಕಾರ್ಕಳದ ಮುದ್ರಾಡಿಯಂತ ಕುಗ್ರಾಮದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಕಲಾ ಕಾರ್ಯಕ್ರಮಕ್ಕೆ ಅರಬ್ ಸಂಯುಕ್ತ ಸಂಸ್ಥಾನದ ಸಹೃದಯಿ ಕಲಾ ಪೋಷಕರು ಬೆಂಬಲ ನೀಡಿ ಕಾರ್ಯಕ್ರಮದ ಯಶಸ್ಸಿನಲ್ಲಿ ಪಾಲುಧಾರರಾಗಿದ್ದಾರೆ ಎಂದು ಹೇಳಿ ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ಪರವಾಗಿ ಯು.ಎ.ಇ. ಯಲ್ಲಿರುವ ಕಲಾ ಪೋಷಕರಿಗೆ ಶಾಲು ಹೊದಿಸಿ ಫಲಕ ನೀಡಿ ಗೌರವಿಸಿ ತಮ್ಮ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಾಟಕೋತ್ಸವದ ಪೂರ್ಣ ಲೇಖನವನ್ನು ಅಮೂಲ್ಯ ಮಾಹಿತಿಯೊಂದಿಗೆ ಪ್ರಕಟಿಸಿ ವಿಶ್ವದಾದ್ಯಂತ ಮುಟ್ಟಿಸಿದ ಗಲ್ಫ್ ಕನ್ನಡಿಗ ಬಳಗದ ಸೇವೆಯನ್ನು ಸ್ಮರಿಸಿಕೊಂಡು ಕಲಾ ಸೇವೆಗೆ ಮಾಧ್ಯಮಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.



ಬಿ. ಕೆ. ಗಣೇಶ್ ರೈಬ್ ಸಂಯುಕ್ತ ಸಂಸ್ಥಾನ

Saturday, 16 April 2011

ರಂಗಭೂಮಿಯಲ್ಲಿ ತೊಟ್ಟಬಾಣ ಮತ್ತೆ ತೊಡದ ಹೊಸ ಆಶಯ ಮೂಡಲಿ: ಸಿ ಬಸವಲಿಂಗಯ್ಯ

 ಹೆಬ್ರಿ : ರಂಗಭೂಮಿ ಒಂದು ಜಂಗಮ ಕಲೆ.ಆದ್ದರಿಂದ ಅದು ಶಾಸ್ತ್ರಗಳನ್ನು ಮುರಿದು ಹೊಸ ಕಥನವನ್ನು ಕಟ್ಟುತ್ತದೆ. ಅನಾದಿಕಾಲವನ್ನು ವರ್ತಮಾನಕ್ಕೆ ತರುವುದು, ವರ್ತಮಾನವನ್ನು ಪುರಾಣಗೊಳಿಸುವುದು ರಂಗಭೂಮಿಗೆ ಮಾತ್ರ ಸಾಧ್ಯ ಎಂದು ಖ್ಯಾತ ರಂಗನಿರ್ದೇಶಕ ಸಿ ಬಸವಲಿಂಗಯ್ಯ ಹೇಳಿದರು.
ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿ ಇದರ ರಜತ ಸಂಭ್ರಮದ ಅಂಗವಾಗಿಭಾನುವಾರಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿ ಇದರ ಆವರಣದಲ್ಲಿ ನಿರ್ಮಿಸಿರುವ ಬಿ.ವಿ ಕಾರಂತ ರಂಗವೇದಿಕೆಯಲ್ಲಿ ಜರಗುತ್ತಿರುವ ರಾಷ್ಟ್ರೀಯ ನಾಟಕೋತ್ಸ

ವದ ಅಂಗವಾಗಿ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಮಾಯಣ, ಮಹಾಭಾರತ ಮತ್ತು ಕಾಳಿದಾಸರ ಕಥನ ಪರಂಪರೆ ಇಂದಿಗೂ ಚಲನಶೀಲತೆಯಿಂದ ಪ್ರಸ್ತುತವಾಗಿದೆ. ಈ ಪರಂಪರೆಯಲ್ಲಿಯ ಪ್ರತಿಮೆರೂಪಕಗಳು ಹೊಸ ಆಕೃತಿಗಳಲ್ಲಿ ಕಟ್ಟುವ ಪ್ರಯತ್ನ ರಂಗಭೂಮಿಯಲ್ಲಿ ನಡೆಯಬೇಕಾಗಿದೆ.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿ ಅಂಬಾತನಯ ಮುದ್ರಾಡಿ ಮಾತನಾಡಿ ಕಾಲಪ್ರಜ್ಞೆ ಮತ್ತು ಕಲಾಪ್ರಜ್ಞೆಯಿಂದ ನಾಟಕಗಳು ಪ್ರದರ್ಶಗೊಳ್ಳಬೇಕು. ಪ್ರದರ್ಶನದಲ್ಲೂ ಪ್ರೇಕ್ಷಕರಿಗೆ  ಒಂದು ದರ್ಶನ ಸಾಧ್ಯವಾಗಬೇಕು ಎಂದರು. ರಂಗಕರ್ಮಿ ಡಾ. ನಾಗೇಶ್ ಬೆಟ್ಟಕೋಟೆ ಬೆಂಗಳೂರು ಮತ್ತು ನಾಟ್ಕ ಮುದ್ರಾಡಿಯ ಸಂಚಾಲಕರಾದ ಧರ್ಮಯೋಗಿ ಮೋಹನ್ ಉಪಸ್ಥಿತರಿದ್ದರು. ಪ್ರಸಾದ್ ರಾವ್ ಕಾರ್ಯಕ್ರಮ ನಿರೂಪಿಸಿದರು. ನಾಟ್ಕ ಸಂಘಟನೆಯ ಅಧ್ಯಕ್ಷರಾದ ಸುಕುಮಾರ್ ಮೋಹನ್ ಸ್ವಾಗತಿಸಿದರು. ಸುರೇಂದ್ರ ಮೋಹನ್ ವಂದಿಸಿದರು.  ಬಳಿಕ ನಡೆದ ಸಮಕಾಲೀನ ರಂಗಭೂಮಿಯ ವಸ್ತು ಮತ್ತು ಆಶಯ ವಿಚಾರಗೋಷ್ಠಿಯಲ್ಲಿ ಬೆಂಗಳೂರಿನ ಪ್ರೊ ಸುಬ್ರಹ್ಮಣ್ಯಸ್ವಾಮಿ, ಐ ಕೆ ಬೋಳುವಾರು,ಪುತ್ತೂರು ಪ್ರಬಂಧ ಮಂಡಿಸಿದರು.ಗೋಷ್ಠಿಯ ಸಮನ್ವಯಕಾರರಾಗಿ ಪ್ರಸಾದ್ ರಾವ್ ಮಾತನಾಡಿದರು. ಸಂತೋಷ ನಾಯಕ್ ಪಟ್ಲ ನಿರೂಪಿಸಿದರು.

ರಾಷ್ಟ್ರೀಯ ನಾಟಕೋತ್ಸವದಲ್ಲಿ ಮುದ್ರಾಡಿಯ ಹಿರಿಯ ನಾಗರಿಕರಿಗೆ ಸನ್ಮಾನ

ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿ ಇದರ ರಜತ ಸಂಭ್ರಮದ ಅಂಗವಾಗಿ ಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿ ಇದರ ಆವರಣದಲ್ಲಿ ನಿರ್ಮಿಸಿರುವ ಬಿ.ವಿ ಕಾರಂತ ರಂಗವೇದಿಕೆಯಲ್ಲಿ ಜರಗುತ್ತಿರುವ ರಾಷ್ಟ್ರೀಯ ನಾಟಕೋತ್ಸವ ನವರಂಗೋತ್ಸವದ 5ನೇ ದಿನದ ಸಭಾ ಕಾರ್ಯಕ್ರಮದ ಲ್ಲಿ ಊರಿನ ಹಿರಿಯ ನಾಗರಿಕರಾದ ಕೆರೆದಂಡೆ ವೆಂಕಟೇಶ್ ನಾಯಕ್, ನಿವೃತ್ತ ಪೋಸ್ಟ್ ಮಾಸ್ಟರ್ ಬಾಲಕೃಷ್ಣ ಪೈ, ಪೋಸ್ಟಮ್ಯಾನ್ ಮುದ್ದು ಸುವರ್ಣ ಮತ್ತು ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿ ಯ ಶಿಕ್ಷಕಿ ಅರುಣಾ ಟೀಚರ್‌ರವರನ್ನು ನಾಟ್ಕ ಸಂಚಾಲಕರಾದ ಧರ್ಮಯೋಗಿ ಶ್ರೀ ಮೋಹನ್‌ರವರು ರಂಗ ಗೌರವ ನೀಡಿ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕೆರೆದಂಡೆ ವೆಂಕಟೇಶ್ ನಾಯಕ್‌ರವರು, ಕಲಾವಿದರ ಕೊರತೆ, ಪ್ರೇಕ್ಷಕರ ಕೊರತೆ ಇದ್ದರೂ ಸಹ ಛಲಬಿಡದ ತ್ರಿವಿಕ್ರಮನಂತೆ ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿತಂಡವನ್ನು ಸ್ಥಾಪಿಸಿ ನಿರಂತರ ರಂಗಚಟುವಟಿಕೆಗಳನ್ನು ಕೈಗೊಂಡು ದೇಶದ ಮೂಲೆ ಮೂಲೆಗಳಿಗೆ ನಾಟಕ ಕಂಪನ್ನು ಪಸರಿಸಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅತ್ಯತ್ತಮ ಪ್ರಶಸ್ತಿಗಳನ್ನು ಪಡೆದುಕೊಂಡು ಇದೀಗ ರಾಷ್ಟ್ರೀಯ ನಾಟಕೋತ್ಸವವನ್ನು ನಡೆಸುತ್ತಿರುವ ಸಂಚಾಲಕರಾದ ಧರ್ಮಯೋಗಿ ಮೋಹನ್ ಮತ್ತವರ ಮಕ್ಕಳು ರಾಷ್ಟ್ರಮಟ್ಟದಲ್ಲೇ ಶ್ಲಾಘನೀಯರು, ನಮತುಳುವೆರ್ ಮುದ್ರಾಡಿ ತಂಡವು ಯಾವುದೇ ರೀತಿಯ ಎಡರು ತೊಡರು ಟೀಕೆ ಟಿಪ್ಪಣಿಗಳಿಗೆ ಅಂಜದೇ ನಿರಂತರ ರಂಗ ಚಟುವಟಿಕೆಯನ್ನು ನಡೆಸಿ ಮದ್ರಾಡಿಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಅಜರಾಮರವಾಗಿಸಿದ ಹೆಮ್ಮೆಯ ರಂಗತಂಡವಾಗಿದೆ. ಸದಾರಮೆಯಂತಹ ಅತ್ಯತ್ತಮವಾದ ಹಳೇ ನಾಟಕಗಳನ್ನು ಮುದ್ರಾಡಿಯ ಜನರಿಗೆ ನೋಡಲು ಅವಕಾಶ ಮಾಡಿಕೊಟ್ಟ ಈ ತಂಡಕ್ಕೆ ಸದಾ ಯಶಸ್ಸು ದೊರೆಯಲಿ ಎಂದು ಹಾರೈಸಿದರು. ಸನ್ಮಾನಿತರಾದ ಶ್ರೀ ಬಾಲಕೃಷ್ಣ ಪೈ, ಮುದ್ದು ಸುವರ್ಣ ಮತ್ತು ಅರುಣಾ ಟೀಚರ್ ಸಂಸ್ಥೆಗೆ ಶುಭ ಹಾರೈಸಿದರು. ದಾಲ್ಮಿಯ ಥಿಯೇಟರ್ ಮುಂಬಯಿಯ ಖ್ಯಾತ ಕಲಾವಿದರಾದ ಲತೇಶ್ ಪೂಜಾರಿ, ಆರ್ ದೇಶ್‌ಪಾಂಡೆ, ಸಂದೀಪ್ ಚವಾನ, ಭೂಮಿಕಾ ಖಂಢೇಲ್ವಾಲ್ ಉಪಸ್ಥಿತರಿದ್ದರು. ನಾಟ್ಕ ಸಂಚಾಲಕರಾದ ಶ್ರೀ ಧರ್ಮಯೋಗಿ ಮೋಹನ್‌ರವರು ಆರ್ಶೀವದಿಸಿದರು. ಕೊನೆಯಲ್ಲಿ ದಾಲ್ಮಿಯ ಥಿಯೇಟರ್ ಮುಂಬಯಿಯ ಕಲಾವಿದರಿಂದ ಮುಕ್ತಿಧಾವ ಎಂಬ ನಾಟಕ ಪ್ರದರ್ಶನಗೊಂಡಿತು
ನಾಟಕೋತ್ಸವದ ವಿಶೇಷತೆಗಳು : ಪ್ರತೀದಿನ ನಾಟಕೋತ್ಸದಲ್ಲಿ ಭಾಗವಹಿಸಿದ ಪ್ರತೀ ರಂಗತಂಡದ ಎಲ್ಲಾ ಕಲಾವಿದರಿಗೂ, ಬೆಳಕು ಸಂಯೋಜಕರಿಗೂ, ವಸ್ತ್ರವಿನ್ಯಾಸಕಾರರಿಗೂ ಮೇಕಪ್ ಮತ್ತು ರಂಗವಿನ್ಯಾಸಕಾರರಿಗೂ ಶಾಲು ಹೊದೆಸಿ ಫಲಕ ನೀಡಿ ಗೌರವಿಸಲಾಯಿತು

ಮುದ್ರಾಡಿ ರಾಷ್ಟ್ರೀಯ ನಾಟಕೋತ್ಸವ ನವರಂಗೋತ್ಸವದಲ್ಲಿ ಅಣ್ಣಾ ವಾಲಿ ನಾಟಕ ಪ್ರದರ್ಶನ

ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿ ಇದರ ರಜತ ಸಂಭ್ರಮದ ಅಂಗವಾಗಿ ಫೆಬ್ರವರಿ 04-03-11 ಸಂಜೆ ಗಂಟೆ 7.30 ಕ್ಕೆ ಅತಿಥೇಯ ನಾಟ್ಕ ಮುದ್ರಾಡಿ ಇವರಿಂದ ಅಣ್ಣಾ ವಾಲಿ ನಾಟಕ ಪ್ರದರ್ಶನಗೊಂಡಿದೆ.
  ಪುರಾಣದ ವಾಲಿ-ಸುಗ್ರೀವರ ಕಥಾನಕವನ್ನು ಹೊಸ ದೃಷ್ಟಿಕೋನದಲ್ಲಿ ಪ್ರಸ್ತುತಪಡಿಸುತ್ತಿರುವ ಅಣ್ಣಾ ವಾಲಿ ನಿರ್ದೇಶನ ಗುರುರಾಜ್ ಮಾರ್ಪಳ್ಳಿಯವರದು. ಸುಕುಮಾರ್ ಮೋಹನ್, ಸುಗಂಧಿ ಉಮೇಶ್ ಕಲ್ಮಾಡಿ, ಸುಧೀಂದ್ರ ಮೋಹನ್ ಮುಂತಾದವರ ನಟನೆಯ ಈ ನಾಟಕದ ಕನ್ನಡ ರಂಗ ಪ್ರಯೋಗ ಮುಂಬೈ ನಾಟಕ ಸ್ಪರ್ದೆಯಲ್ಲಿ 5 ವೈಯಕ್ತಿಕ ಪ್ರಶಸ್ತಿಯೊಂದಿಗೆ ನಾಟಕ ಪ್ರಶಸ್ತಿಯನ್ನೂ ಪಡೆದಿದೆ.

ಕನ್ನಡದ ಶ್ರೇಷ್ಠಕೃತಿಗಳಲ್ಲಿ ಒಂದಾದ ಜ್ಞಾನಪೀಠ ಪ್ರಶಸ್ತಿ ಪಡೆದ ಮೊತ್ತ ಮೊದಲ ಕವಿ ಕುವೆಂಪು ಅವರ ಶ್ರೀರಾಮಾಯಣದರ್ಶನಂ ಮತ್ತು ಯಕ್ಷಲೋಕದಲ್ಲಿ ಚಿರಪರಿಚಿತರಾಗಿದ್ದ ಪಾರ್ತಿಸುಬ್ಬ ಆಧಾರಿತ ಕೃತಿಯಾದ ಈ"ಅಣ್ಣಾವಾಲಿ'' ಕುಟುಂಬ ಕಲಹದಲ್ಲಿ ನಲುಗಿ ಅಸಾಹಯಕಳಾಗಿ ಕೇಳುವ ಹೆಣ್ಣೋರ್ವಳ ಉತ್ತರ ಸಿಗದ ಪ್ರಶ್ನೆಗಳು ಇಂದಿನ ಪುರುಷ ಪ್ರಧಾನ ಸಮಾಜಕ್ಕೂ ಕನ್ನಡಿ ಹಿಡಿಯುತ್ತದೆ. ನಾಟಕದ ಸಂಗೀತ ಅಳವಡಿಕೆಯು ಭಾವನಾತ್ಮಕವಾಗಿದ್ದು ಯಕ್ಷಬ್ಯಾಲೆಯ ನೆನಪನ್ನು ಮರುಕಳಿಸುವಂತದ್ದಾಗಿದೆ.

ಸಂಸ್ಕೃತಿ ಪ್ರಜ್ಞೆ, ಪ್ರೀತಿ ಬದ್ಧತೆ ಇದ್ದರೆ ಮಾತ್ರ ರಂಗಸಂಸ್ಕೃತಿ ಬೆಳೆಯುತ್ತದೆ : ನಾಗತಿಹಳ್ಳಿ

 ಮುದ್ರಾಡಿ : ಸಂಸ್ಕೃತಿಯ ಶ್ರೇಷ್ಠತೆಯ ತರತಮ ಜ್ಞಾನವನ್ನೇ ಕಳೆದುಕೊಂಡಿರುವ ಆಧುನಿಕ ಲೋಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರಂಗಸಂಸ್ಕೃತಿ ಕಟ್ಟುವ ಕೆಲಸ ಭಾರಿ ಸವಾಲಿನದು. ಇದಕ್ಕೆ ನೆಲದ ಸಂಸ್ಕೃತಿ ಪ್ರಜ್ಞೆ, ಪ್ರೀತಿ ಬದ್ಧತೆ ಇದ್ದರೆ ಮಾತ್ರ ಸಾಧ್ಯ. ಮುದ್ರಾಡಿಯಂಥಹ ಪುಟ್ಟಗ್ರಾಮದಲ್ಲಿ ಇದು ಸಾಧ್ಯವಾಗಿದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಹೇಳಿದರು. ಅವರು ಹೆಬ್ರಿ ಮುದ್ರಾಡಿಯ ನಮ್ಮ ತುಳುವೆರ್ ಕಲಾ ಸಂಘಟನೆ (ರಿ)ತನ್ನ ರಜತಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ನವರಂಗೋತ್ಸವ ಹತ್ತು ದಿನಗಳ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಪುಟ್ಟ ಹಳ್ಳಿಯೊಂದರಲ್ಲಿ ಕುಳಿತು ಜಗತ್ತನ್ನು ನೋಡುವುದು ಹಾಗೇ ಜಗತ್ತೆಲ್ಲಾ ಹಳ್ಳಿ ಕಡೆ ಹೊರಳಿ ನೋಡುವುದು ಇಂತಹ ಸಂಸ್ಕೃತಿ ಕಟ್ಟುವ ಕೆಲಸದಿಂದ ಸಾಧ್ಯವಾಗುತ್ತದೆ. ಮುದ್ರಾಡಿಯನ್ನು ಜಗತ್ತು ಈ ದೃಷ್ಟಿಯಿಂದ ಗಮನಿಸುತ್ತಿದೆ. ಇಂಥಹ ಹತ್ತಾರು ಮುದ್ರಾಡಿಗಳು ಹುಟ್ಟಿಕೊಳ್ಳಲಿ ರಂಗೋತ್ಸವ ನಿತ್ಯೋತ್ಸವವಾಗಲಿ ಎಂದು ಹಾರೈಸಿದರು. ಸಾಹಿತಿ ಬೆಳಗಾವಿಯ ಪ್ರೊ ಡಿ ಕೆ ಚೌಗುಲೆ ಮಾತನಾಡಿ ಕರಾವಳಿ ಸಂಸ್ಕೃತಿ ಇಲ್ಲಿಯ ಯಕ್ಷಗಾನ, ತುಳುಜಾನಪದಗಳಿಂದ ಶ್ರೀಮಂತವಾಗಿದೆ. ಮರಾಠಿ ಸಂಸ್ಕೃತಿಯ ಮೇಲೆ ಯಕ್ಷಗಾನದ ಪ್ರಭಾವ ಇದೆ. ಪರಸ್ಪರ ಆದಾನ ಪ್ರದಾನಗಳಿಂದ ಸಂಸ್ಕೃತಿಯ ಜೀವಂತಿಕೆ ಸಾಧ್ಯವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತುಳು ಸಾಹಿತಿ ಡಿ ಕೆ ಚೌಟ ವಹಿಸಿದ್ದರು. ರಂಗಕರ್ಮಿ ನಾ ದಾಮೋದರ ಶೆಟ್ಟಿ, ದುಬೈಯ ಉದ್ಯಮಿ ಹರೀಶ ಸೇರಿಗಾರ್, ನಮ್ಮ ತುಳುವೆರ್ ಕಲಾ ಸಂಘಟನೆ (ರಿ) ಗೌರವಾಧ್ಯಕ್ಷ ಧರ್ಮಯೋಗಿ ಮೋಹನ್ ಉಪಸ್ಥಿತರಿದ್ದರು. ಸುರೇಂದ್ರ ಮೋಹನ್ ಸ್ವಾಗತಿಸಿದರು. ಸುಕುಮಾರ್ ಮೋಹನ್ ವಂದಿಸಿದರು. ಉದ್ಯಾವರ ನಾಗೇಶ ಕುಮಾರ್ ನಿರೂಪಿಸಿದರು.

Tuesday, 12 April 2011

ನವರಂಗೋತ್ಸವದಲ್ಲಿ ಆಚಾರ್ಯ ಪ್ರಹಸನ ನಾಟಕ ಪ್ರದರ್ಶನ

ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿ ಇದರ ರಜತ ಸಂಭ್ರಮದ ಅಂಗವಾಗಿ ರಾಷ್ಟ್ರೀಯ ನಾಟಕೋತ್ಸವ ನವರಂಗೋತ್ಸವದಲ್ಲಿ26-02-11 ಸಂಜೆ ಗಂಟೆ 7.30ಕ್ಕೆ ಚರಕ ಕಲಾವಿದರು ಹೆಗ್ಗೋಡು ಇವರಿಂದ ಮೋಲಿಯೇರ್‌ನ ಆಚಾರ್ಯ ಪ್ರಹಸನ ನಾಟಕ ಪ್ರದರ್ಶನಗೊಂಡಿತು.
 ಪ್ರಸ್ತುತ ಆಚಾರ್ಯ ಪ್ರಹಸನ ಮೋಲಿಯರ್‌ನ ತಾರ್ತುಫ್ ನಾಟಕದ ರೂಪಾಂತರವೆನ್ನಬಹುದು. ಇದನ್ನು ಕನ್ನಡಕ್ಕೆ ರೂಪಾಂತರ ಮಾಡಿ ನಿರ್ದೇಶಿಸಿದವರು ಪ್ರಸನ್ನ. ಸಮಾಜದಲ್ಲಿರುವ ಮೋಸ, ಕಪಟ, ವಂಚನೆಯ ಗುಣಗಳನ್ನು ಆಯುಧಗಳಂತೆ ಬಳಸಿಕೊಳ್ಳುವವರು ಮತ್ತು ಅವುಗಳಿಗೆ ಕುರಿಮಂದೆಯಂತೆ ಬಲಿಯಾಗುವವರನ್ನು ವಿಡಂಬಿಸುವ ನಾಟಕವಿದು. ಜನರು ಬೈಗುಳನ್ನು ಸಹಿಸಿಕೊಂಡಾರು ಆದರೆ ಲೇವಡಿಯನ್ನು ಸಹಿಸಲಾರರು ಎಂಬುದನ್ನು ಕಂಡುಕೊಂಡಿದ್ದ ಮೋಲಿಯೇರ್ ಸಮಾಜವನ್ನು ತಿದ್ದಲು ಲೇವಡಿಯನ್ನೇ ತಂತ್ರವಾಗಿ ಬಳಸಿಕೊಂಡ. ಧಾರ್ಮಿಕತೆಯ ಸೋಗಿನಲ್ಲಿ ಪರರ ದುಡಿಮೆಗೆ ಬಂದಳಿಕೆಯಂತೆ ಅಂಟಿಕೊಂಡು, ಅವರ ಸರ್ವಸ್ವವನ್ನು ನಾಶಮಾಡಬಲ್ಲ ದುರುಳ ಪಾತ್ರಗಳನ್ನು ಲೇವಡಿ ಮಾಡುವ ಮೂಲಕ ಅವುಗಳ ಬಣ್ಣ ಬಯಲು ಮಾಡುವುದು ನಾಟಕದ ಕಥಾ ಹಂದರ.

ಮುದ್ರಾಡಿ ರಾಷ್ಟ್ರೀಯ ನಾಟಕೋತ್ಸವ ನವರಂಗೋತ್ಸವದಲ್ಲಿ ಸದಾರಮೆ ನಾಟಕ ಪ್ರದರ್ಶನ

ನಮ ತುಳುವೆರ್ ಕಲಾ ಸಂಘಟನೆ (ರಿ) ನಾಟ್ಕ ಮುದ್ರಾಡಿ ಇದರ ರಜತ ಸಂಭ್ರಮದ ಅಂಗವಾಗಿ ಫೆಬ್ರವರಿ 25,2011 ರಿಂದ ಮಾರ್ಚ್ 05,2011 ರವರೆಗೆ ಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿ ಇದರ ಆವರಣದಲ್ಲಿ ನಿರ್ಮಿಸಿದಬಿ.ವಿ ಕಾರಂತ ರಂಗವೇದಿಕೆಯಲ್ಲಿ ಜರಗಿದರಾಷ್ಟ್ರೀಯ ನಾಟಕೋತ್ಸವ ನವರಂಗೋತ್ಸವದಲ್ಲಿಫೆಬ್ರವರಿ 25ರ ಸಂಜೆ ಗಂಟೆ 7.30ಕ್ಕೆ ರಂಗಾಯಣ ಮೈಸೂರು ಇವರಿಂದ ಬೆಳ್ಳಾವೆ ನರಹರಿ ಶಾಸ್ತ್ರಿ ರಚಿಸಿ ವೈ.ಎಮ್ ಪುಟ್ಟಣ್ಣಯ್ಯ ನಿರ್ದೇಶಿಸಿರುವ ಸದಾರಮೆ ಎಂಬ ಕನ್ನಡ ನಾಟಕ ಪ್ರದರ್ಶನಗೊಂಡಿತು.
7 ದಶಕಗಳ ಹಿಂದೆ ಪ್ರಕಟವಾದ ಬೆಳ್ಳಾವೆ ನರಹರಿ ಶಾಸ್ತ್ರಿಗಳ ಸದಾರಮೆ ನಾಟಕ ಗುಬ್ಬಿ ವೀರಣ್ಣಯ್ಯ ಮತ್ತು ಹಿರಣ್ಣಯ್ಯ ನಾಟಕ ಮಂಡಳಿಗಳಿಂದ ಒಂದು ಕಾಲಕ್ಕೆ ಕರ್ನಾಟಕ ರಾಜ್ಯದಾದ್ಯಂತ ಜನಪ್ರಿಯವಾದ ನಾಟಕ ಆ ಸಂದರ್ಭಕ್ಕೆ ಬೇಕಾಗಿದ್ದ ಎಲ್ಲಾ ಆಶಯಗಳು ಈ ನಾಟಕದಲ್ಲಿ ಅಡಕವಾಗಿದೆ. ಬಹುತೇಕ ಜನಪದ ಕತೆಗಳಲ್ಲಿ ಕಂಡುಬರುವ ಆಶಯ ಹೆಣ್ಣು ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಮತ್ತು ಅದರಿಂದ ಪಾರಾಗುವುದು. ಸಾಮಾನ್ಯವಾಗಿ ಎಲ್ಲಾ ಜನಪದ ಕತೆಗಳ ಹೆಣ್ಣು ಹೆಚ್ಚು ಧಾರಣಶಕ್ತಿಯುಳ್ಳವಳಾಗಿ ಕಾಣಿಸಿಕೊಳ್ಳುತ್ತಾಳೆ. ನಾಟಕದ ಆರಂಭಕ್ಕೆ ಕೊಡ ಹೊತ್ತು ನೃತ್ಯಗೈಯುವ ಹೆಣ್ಣುಮಗಳು ನಾಟಕದ ಅಂತ್ಯದಲ್ಲಿ ಕತ್ತಿ ದಂಡ ಹಿಡಿದವರಲ್ಲದೇ ಕಾಮವಾಂಛಿತ ಪುರುಷರನ್ನೆಲ್ಲಾ ತಳ್ಳಿಹಾಕುತ್ತಾ ಸಿಂಹಾಸನವೇರಿ ಕೂರುವ ಒಂದು ಸಾಂಕೇತಿಕ ನಾಟಕ ಸದಾರಮೆ.
ಆ ಕಾಲದ ನಾಟಕ ಮಂಡಳಿಗಳು ತಮ್ಮ ರಸಿಕವರ್ಗದ ರಂಜನೆಗಾಗಿ ನೀತಿಪಾಠ ಪ್ರದರ್ಶನಕ್ಕಾಗಿ ಈ ನಾಟಕವನ್ನು ಆಯ್ಕೆ ಮಾಡಿಕೊಂಡವು. ಈ ನಾಟಕದ ಪ್ರದರ್ಶನಗಳು ಯಶಸ್ಸನ್ನು ಗಳಿಸಿದ್ದು ಈಗ ಇತಿಹಾಸಕ್ಕೆ ಸೇರಿದ ಮಾತು.ಈ ಬಗೆಯ ಐತಿಹಾಸಿಕ ನೆನಪಿನ ಗುಂಗಿನ ಮೇಲೆ ಇದೀಗ ನಿರ್ದೇಶಕ ವೈ.ಯಂ ಪುಟ್ಟಣ್ಣಯ್ಯ ಸದಾರಮೆಯನ್ನು ಅದ್ಭುತವಾಗಿ ಪ್ರೇಕ್ಷಕರಿಗೆ ಕಟ್ಟಿಕೊಟ್ಟಿದ್ದಾರೆ. ನವೋದಯ ಪೂರ್ವ ನಾಟಕಗಳ ಪುರ್ನನವೀಕರಣದ ಪ್ರಯತ್ನಕ್ಕೆ ನಾಂದಿ ಹಾಡಿದೆ ರಂಗಾಯಣ ಮೈಸೂರು ತಂಡದ ಸದಾರಮೆ.

Monday, 11 April 2011

ರಾಷ್ಟ್ರೀಯ ನಾಟಕೋತ್ಸವ ಸಂಭ್ರಮ!!!



dharmayogi mohan



            ನಮತುಳುವೆರ್ ಕಲಾಸಂಘಟನೆ(ರಿ) ಮುದ್ರಾಡಿ
sukumar mohan
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲೊಂದು ಸಣ್ಣ ಗ್ರಾಮ ಮುದ್ರಾಡಿ. ಆದರೆ ರಂಗಚಟುವಟಿಕೆಯ ದೃಷ್ಟಿಯಿಂದ ರಾಷ್ಟ್ರೀಯ ಮಾತ್ರವಲ್ಲ ಅಂತರಾಷ್ಟ್ರೀಯ ನಕ್ಷೆಯಲ್ಲೂ ತನ್ನ ಗುರುತುಮೂಡಿಸಿರುವ ಗ್ರಾಮ ಮುದ್ರಾಡಿ. ಇದಕ್ಕೆ ಕಾರಣ, 25 ವರ್ಷಗಳಿಂದ ಅವಿರತವಾಗಿ ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡು ಸುಮಾರು 60ಕ್ಕೂ ಹೆಚ್ಚು ನಾಟಕಗಳ 1500ಕ್ಕಿಂತಲೂ ಮಿಕ್ಕಿ ಪ್ರದರ್ಶನಗಳನ್ನು ನೀಡಿರುವ ಸಂಸ್ಥೆ ನಮತುಳುವೆರ್ ಕಲಾಸಂಘಟನೆಮುದ್ರಾಡಿ. ಈ ಸಾಂಸ್ಕೃತಿಕ ಸಂಸ್ಥೆಯ ಬೆನ್ನೆಲುಬಾಗಿರುವ ಇಲ್ಲಿನ ಶ್ರೀ ಆದಿಶಕ್ತಿ ದೇವಸ್ಥಾನ, ಹಾಗೂ ಧರ್ಮಯೋಗಿ ಶ್ರೀ ಮೋಹನ್, ಧಾರ್ಮಿಕ ಹಬ್ಬಗಳನ್ನು, ನಾಟಕೋತ್ಸವಗಳನ್ನಾಗಿಸಿ, ರಂಗಭೂಮಿಯ ಬೆಳವಣಿಗೆಗೆ ನೀಡಿರುವ ಕೊಡುಗೆ ಅನನ್ಯ. ನಾಟ್ಕ ಮುದ್ರಾಡಿಎಂದೇ ಗುರುತಿಸಿಕೊಂಡಿರುವ ನಮತುಳುವೆರ್ ಕಲಾಸಂಘಟನೆಯ ಅಧ್ಯಕ್ಷರು ಶ್ರೀ ಸುಕುಮಾರ್ ಮೋಹನ್. ಕೆಚ್ಚೆದೆಯಿಂದ ಗ್ರಾಮೀಣ ಮಟ್ಟದ ತಂಡವನ್ನು ಕಟ್ಟಿಕೊಂಡು ನಟನಾಗಿ, ನಿರ್ದೇಶಕನಾಗಿ ಹಾಗೂ ಸಂಘಟಕನಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಸುಕುಮಾರ್ ಮೋಹನ್‌ರಿಗೆ ಅನೇಕ ಗೌರವಗಳು ಸಂದಿವೆ.
ಅವುಗಳಲ್ಲಿ ಹೆಮ್ಮೆಯ ಪ್ರಶಸ್ತಿಗಳೆಂದರೆ ಕರ್ನಾಟಕ ನಾಟಕ ಅಕಾಡೆಮಿಯ ಸಿ.ಜಿ.ಕೆ. ಯುವರಂಗ ಪ್ರಶಸ್ತಿ ಹಾಗೂ ಪ್ರಸ್ತುತ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯತ್ವ. ಸದಾ ಕ್ರಿಯಾಶೀಲವಾಗಿರುವ ನಾಟ್ಕ ಮುದ್ರಾಡಿನಡೆದುಬಂದ ಹೆಜ್ಜೆಗಳು ಗಮನಾರ್ಹ.

ಕೃಷ್ಣಮೂರ್ತಿ ಕವತ್ತಾರ್, ಬಾಸುಮ ಕೊಡಗು, ಜಿ. ಸೀತಾರಾಮ ಶೆಟ್ಟಿ ಕೂರಾಡಿ, ಜೀವನ್‌ರಾಂ ಸುಳ್ಯ, ಪ್ರಮೋದ್ ಶಿಗ್ಗಾಂ, ಉದ್ಯಾವರ ನಾಗೇಶ್ ಕುಮಾರ್, ಸಿ. ಬಸವಲಿಂಗಯ್ಯ, ಶೀನಾ ನಾಡೋಳಿ, ಗುರುರಾಜ ಮಾರ್ಪಳ್ಳಿ,, ದಾಕ್ಷಾಯಣಿ ಭಟ್, ಮಲ್ಲಿಕಾರ್ಜುನ ಮಹಾಮನೆ, ಉದಯ್ ಸೋಸಲೆ, ಗೀತಾ ಸುಳ್ಯ ಮುಂತಾದ ರಂಗತಜ್ಞರಿಂದ ತರಬೇತಿ ಪಡೆದು, ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿರುವ ಈ ಸಂಸ್ಥೆಗೆ ಈಗ ಇಪ್ಪತ್ತೈದರ ಹರೆಯ. ಆರಂಭದ ದಿನಗಳಲ್ಲಿ ಮಾಮೂಲಿ ತುಳುನಾಟಕಗಳ ಮೂಲಕ ರಂಗದಲ್ಲಿ ಬಾಲ ಹೆಜ್ಜೆಯಿಟ್ಟ ಈ ಸಂಸ್ಥೆ, ಕೃಷ್ಣಮೂರ್ತಿ ಕವತ್ತಾರ್‌ರವರ ನಿರ್ದೇಶನದಲ್ಲಿ ಸಿರಿಸಂಪಿಗೆಯನ್ನು ಪ್ರದರ್ಶಿಸಿದಂದಿನಿಂದ ಹೊಸರೀತಿಯ ಕನ್ನಡ ಹಾಗೂ ತುಳು ನಾಟಕಗಳ ಜೈತ್ರಯಾತ್ರೆಯನ್ನು ಆರಂಭಿಸಿತು. ನಂತರದ ದಿನಗಳಲ್ಲಿ ಸಾಹೇಬರು ಬರುತ್ತಾರೆ, ಪಿಲಿಪತ್ತಿ ಗಡಸ್, ಧರ್ಮೆತ್ತಿ ಮಾಯೆ, ದೊಂಬೆರೆ ಚೆನ್ನಿ, ಕಾಳಾಪುರತ ಕಿಲೆಸಿಪಂಪನಿಗೆ ಬಿದ್ದ ಕನಸು, ಹುಲಿಯ ನೆರಳು, ಅಸುದ್ದೊ, ಒಂದು ಚೂರಿಯ ಕತೆ, ಮೀಡಿಯಾ, ದಂಗೆಯ ಮುಂಚಿನ ದಿನಗಳು, ನಲ್ಪೊದ ನಲಿಕೆ, ಹೂವು, ನಾ ತುಕಾರಾಮ ಅಲ್ಲ, ವಾಲಿ.......... ಹೀಗೆ ಸಾಗುತ್ತದೆ ಪ್ರದರ್ಶಿತ ನಾಟಕಗಳ ವಿವರ. ನಾಟ್ಕ ಮುದ್ರಾಡಿಯು ಕನ್ನಡ ಹಾಗೂ ತುಳು ರಂಗಭೂಮಿಯ ಬೆಳವಣಿಗೆಯೊಂದಿಗೆ ಸಾಗುವ ತನ್ನ ಛಾಪನ್ನು ಮೂಡಿಸುವ ಆಶಯವನ್ನು ಈ ವಿವರಗಳಲ್ಲಿ ಗಮನಿಸಬಹುದಲ್ಲವೇ? ನಾಟ್ಕತಂಡದ ಪಿಲಿ ಪತ್ತಿ ಗಡಸ್(ರಚನೆ: ಡಿ.ಕೆ. ಚೌಟ. ನಿ: ಜೀವನ್ ರಾಂ ಸುಳ್ಯ) 135ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವುದು, ತುಳು ಆಧುನಿಕ ರಂಗಭೂಮಿಯ ಇತಿಹಾಸದಲ್ಲೇ ದಾಖಲೆಯಾಗಬಲ್ಲುದಲ್ಲವೇ?

pilipatthi gadas
     ರಂಗಭೂಮಿಗೆ ಸಮಗ್ರ ಬದ್ಧತೆಯನ್ನು ಹೊಂದಿರುವ ನಾಟ್ಕ ಮುದ್ರಾಡಿ ಪ್ರದಶರ್ನ ಮಾತ್ರವಲ್ಲದೇ ವಿಚಾರ ಸಂಕೀರ್ಣಗಳನ್ನೂ, ರಂಗತರಬೇತಿ ಶಿಬಿರಗಳನ್ನೂ ಹಾಗೂ ರಂಗ ಸಾಧಕರಿಗೆ ಸಂಮಾನ ಕಾರ್ಯಕ್ರಮಗಳನ್ನು ಕೂಡ ನಿರಂತರವಾಗಿ ನಡೆಸಿಕೊಂಡು ಬಂದಿದೆ. ಇನ್ನೂ ಹೆಮ್ಮೆಯ ಸಂಗತಿಯೆಂದರೆ ಸಮಕಾಲೀನ ಸಮಸ್ಯೆಗಳಿಗೆ ತುಡಿಯುವ ಅನೇಕ ಬೀದಿನಾಟಕಗಳನ್ನು ರಾಜ್ಯಾದ್ಯಂತ ಚಳುವಳಿಯ ಮಾದರಿಯಲ್ಲಿ ಪ್ರದರ್ಶಿಸುತ್ತಿರುವುದು ಜನಜಾಗೃತಿ ಹಾಗೂ ಶೈಕ್ಷಣಿಕ ವಿಷಯಗಳಲ್ಲಿ ಈ ಸಂಸ್ಥೆಯು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ರಂಗಭೂಮಿಯಲ್ಲಿ ಕ್ರಿಯಾಶೀಲವಾಗುವುದೆಂದರೆ ಸಮುದಾಯದೊಂದಿಗೆ ತೆರೆದುಕೊಳ್ಳುವುದೆಂಬ ಬಾಲಪಾಠವನ್ನು ಜೀರ್ಣಿಸಿಕೊಂಡಿರುವ ಈ ಸಂಸ್ಥೆಯ ಎಲ್ಲ ಕಲಾವಿದರೂ, ತಾಂತ್ರಿಕವಾಗಿ, ನಟರಾಗಿ ರಂಗದ ಎಲ್ಲಾ ಕೆಲಸಗಳನ್ನು ನಿರ್ವಹಿಸುವಲ್ಲಿ ಶಕ್ತರಾಗಿ ಬೆಳೆಯುತ್ತಿದ್ದಾರೆ. ಒಂದೇ ಕುಟುಂಬದ ಐದು ಕಲಾವಿದರಾದ ಶ್ರೀ ಸುಕುಮಾರ್ ಮೋಹನ್, ಶ್ರೀ ಸುಧೀಂದ್ರ ಮೋಹನ್, ಶ್ರೀ ಸುರೇಂದ್ರ ಮೋಹನ್ ಮಾತ್ರವಲ್ಲದೇ ಕಿರುತೆರೆಯಲ್ಲೂ ಕಾಣಿಸಿಕೊಳ್ಳಲಿರುವ ಶ್ರೀಮತಿ ಸುಗಂಧಿ ಉಮೇಶ್ ಹಾಗೂ ಅವರ ಪತಿ ಶ್ರೀ ಉಮೇಶ್ ಕಲ್ಮಾಡಿ, ಮಾತ್ರವಲ್ಲದೇ ಶ್ರೀಮತಿ ಅಮಿತಾ ಹೆಗ್ಡೆ, ಶ್ರೀಮತಿ ಮಮತಾ, ಶ್ರೀ ಪ್ರಶಾಂತ್, ಶ್ರೀ ಕರುಣಾಕರ ಶಿವಪುರ, ಶ್ರೀ ಭರತ್ ಕುಮಾರ್, ಶ್ರೀ ಅನಿಲ್ ಕುಡ್ಲ ಶ್ರೀ ಗುರುರಾಜ ಆಚಾರ್ಯ, ಶ್ರೀ ನರೇಶ್, ಶ್ರೀ ಸುಧೀರ್, ಶಂಕರ್ ಭಟ್, ಚಂದ್ರಕಲಾ ಎಸ್ ಭಟ್, ಕುಮಾರ್
....... ಹೀಗೆ ನಾಟ್ಕ ಮುದ್ರಾಡಿ ತಂಡದ ಕಲಾವಿದರ ಕುಟುಂಬ ಬೆಳೆಯುತ್ತಿದೆ.
ವರ್ಕ್ಕೆ 12, ನವರಾತ್ರಿಗೆ 9, 20ಕ್ಕೆ 25 ಈಗ 25ಕ್ಕೆ ........
ರಾಷ್ಟ್ರೀಯ ನಾಟಕೋತ್ಸವ......

      ತಿಂಗಳ ತಿರುಳುಎನ್ನುವ ಕಾರ್ಯಕ್ರಮದ ಅಂಗವಾಗಿ ತನ್ನ ಹುಟ್ಟೂರಲ್ಲಿ ವರ್ಷವಿಡೀ ತಿಂಗಳಿಗೊಂದು ನಾಟಕವನ್ನು ಆಹ್ವಾನಿಸಿ ಪ್ರದರ್ಶಿಸುವ ನಾಟ್ಕ ಮುದ್ರಾಡಿನವರಾತ್ರಿಯ ಹರುಷದಲ್ಲಿ ಪ್ರತಿದಿನವೂ ಒಟ್ಟು ಒಂಬತ್ತು ರಂಗಪ್ರದರ್ಶನಗಳನ್ನು ನಡೆಸುತ್ತಾ ರಂಗ ಪ್ರೇಮಿಗಳಿಗೆ ಕಲಾವಿದರಿಗೆ ಆಪ್ತವಾಗುತ್ತಾ ಸಾಗಿ ಬಂದಿದೆ. ತನ್ನ ವಿಂಶತಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಯೋಜನೆಯಂತೆ, ಮುದ್ರಾಡಿಯಲ್ಲಿ ರಾಜ್ಯದ 20 ತಂಡಗಳ 25 ನಾಟಕಗಳನ್ನು 20 ದಿನಗಳಲ್ಲಿ ಪ್ರದರ್ಶಿಸಿ 20-20ಕ್ಕೆ ಹೊಸ ಅರ್ಥವನ್ನು ನೀಡುವಲ್ಲಿ ಸಫಲವಾಗಿದೆ. ಗ್ರಾಮೀಣ ಪರಿಸರದಲ್ಲಿ ಇಂತಹಾ ಸಾಹಸ ಕಾರ್ಯಕ್ಕೆ ಕೈಹಾಕಿ ಸೈ ಎನಿಸಿಕೊಂಡಿರುವ ನಾಟ್ಕ ಮುದ್ರಾಡಿ ತನ್ನ 25ರ ಸಂಭ್ರಮವನ್ನು ಹಂಚಿಕೊಳ್ಳಲು 9 ದಿನಗಳ ರಾಷ್ಟ್ರೀಯ ನಾಟಕೋತ್ಸವವನ್ನು ಆಯೋಜಿಸಿದೆ. ಫೆಬ್ರವರಿ 25ರಿಂದ ಮಾರ್ಚ್ 5ರ ವರೆಗೆ ರಾಷ್ಟ್ರೀಯ ನಾಟಕೋತ್ಸವ ಸಂಭ್ರಮ!!! 
*****