Monday, 26 March 2012

ರಂಗಕರ್ಮಿ ಪ್ರಸನ್ನಗೆ ‘ರಾಷ್ಟ್ರೀಯ ನಾಟಕ ಸಮ್ಮಾನ್’ ಪ್ರಶಸ್ತಿ ಪ್ರದಾನ




ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ (ನಾಟ್ಕ) ಬೆಳ್ಳಿಹಬ್ಬದ ಸವಿನೆನಪಿಗಾಗಿ ಆರಂಭಿಸಿದ ದ್ವಿತೀಯ ವರ್ಷದ ‘ರಾಷ್ಟ್ರೀಯ ನಾಟಕ ಸಮ್ಮಾನ್ ಪ್ರಶಸ್ತಿ’ಯನ್ನು ಈ ಬಾರಿ ಹಿರಿಯ ರಂಗಕರ್ಮಿ ಪ್ರಸನ್ನ ಅವರಿಗೆ ಮುದ್ರಾಡಿ ಬಿ.ವಿ.ಕಾರಂತ ಬಯಲು ರಂಗಮಂದಿರದಲ್ಲಿ ರವಿವಾರ ನೀಡಿ ಗೌರವಿಸಲಾಯಿತು.ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ನೀಡಲಾದ ಈ ಪ್ರಶಸ್ತಿ 25 ಸಾವಿರ ರೂ. ನಗದು, ಶಾಶ್ವತ ಫಲಕವನ್ನು ಒಳಗೊಂಡಿದೆ. ಭಾರತೀಯ ರಂಗ ಪರಂಪರೆಗಳನ್ನು ವಿಶ್ಲೇಷಿಸಿ ರಂಗ ಚಳವಳಿಗೆ ನೀಡಿದ ಕೊಡುಗೆಗಾಗಿ ಪ್ರಸನ್ನ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಕಳೆದ ಬಾರಿ ಕನ್ನಡದ ಹಿರಿಯ ರಂಗ ಕಲಾವಿದೆ ಉಮಾಶ್ರೀ ಅವರು ಈ ಪ್ರಶಸ್ತಿ ಪಡೆದಿದ್ದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಸನ್ನ, ಮುದ್ರಾಡಿಯಂಥ ಪುಟ್ಟ ಗ್ರಾಮ ದಿಂದ ದೊರೆತ ದೊಡ್ಡ ಪ್ರಶಸ್ತಿ ಇದಾಗಿದೆ ಎಂದರು. ಉಡುಪಿ ಜಿಲ್ಲಾ ಮಾಜಿ ಕಸಾಪ ಅಧ್ಯಕ್ಷ ಹಾಗೂ ಸಾಹಿತಿ ಅಂಬಾತನಯ ಮುದ್ರಾಡಿ ಪ್ರಶಸ್ತಿ ಪ್ರದಾನ ಮಾಡಿ, ಪ್ರಸನ್ನ ಅವರ ವ್ಯಕ್ತಿತ್ವ, ಆದರ್ಶಗಳನ್ನು ಬಣ್ಣಿಸಿದರು. ಶಾಸಕ ಎಚ್.ಗೋಪಾಲ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ನಾಟ್ಕ ಸಂಚಾಲಕ ಧರ್ಮಯೋಗಿ ಮೋಹನ್, ನಾಟ್ಕ ಅಧ್ಯಕ್ಷ ಸುಕುಮಾರ್ ಮೋಹನ್ ಉಪಸ್ಥಿತರಿದ್ದರು.

Monday, 19 March 2012

ನಾಟಕಕಾರ ಪ್ರಸನ್ನರಿಗೆ ‘ಮುದ್ರಾಡಿ ನಾಟ್ಕ ಸಂಮಾನ’




 ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯು ಬೆಳ್ಳಿಹಬ್ಬದ ನೆನಪಿನಲ್ಲಿ ಆರಂಭಿಸಿದ ‘ಮುದ್ರಾಡಿ ನಾಟ್ಕ ಸಂಮಾನ’ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಸಾಲಿನಲ್ಲಿ ಹಿರಿಯ ಚಿಂತಕ, ನಿರ್ದೇಶಕ, ನಾಟಕಕಾರ ಪ್ರಸನ್ನ ರಿಗೆ ನೀಡಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಪ್ರಶಸ್ತಿಯು 25ಸಾವಿರ ರೂ. ನಗದು, ಪ್ರಶಸ್ತಿ ಫಲಕವನ್ನು ಹೊಂದಿದೆ. ಮಾ.25ರಂದು ಸಂಜೆ 4ಗಂಟೆಗೆ ಮುದ್ರಾಡಿಯ ಬಿ.ವಿ.ಕಾಂರತ ಬಯಲು ರಂಗಸ್ಥಳದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದರು.ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಂಬಾತನಯ ಮುದ್ರಾಡಿ ಪ್ರಶಸ್ತಿ ಪ್ರದಾನ ಮಾಡಲಿರುವರು. ಅಧ್ಯಕ್ಷತೆಯನ್ನು ಕಾರ್ಕಳ ಶಾಸಕ ಗೋಪಾಲ ಭಂಡಾರಿ ವಹಿಸಲಿರುವರು. ಮುಂಬೈ ಉದ್ಯಮಿ ದಿವಾಕರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಧರ್ಮಯೋಗಿ ಮೋಹನ್ ಆಶೀರ್ವದಿಸಲಿದ್ದಾರೆ. ಸಂಮಾನಕ್ಕೆ ಮೊದಲು ‘ಪ್ರಸನ್ನರೊಂದಿಗೆ ಮಾತುಕತೆ’ ರಂಗಸಂವಾದ ನಡೆ ಯಲಿದ್ದು, ಕಾರ್ಯಕ್ರಮದ ನಂತರ ಮಂಗಳೂರು ಸುವರ್ಣ ಪ್ರತಿಷ್ಠಾನದ ಕಲಾವಿದರಿಂದ ಸದಾನಂದ ಸುವರ್ಣ ನಿರ್ದೇಶಿಸಿದ ‘ಉರುಳು’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಸುಧೀಂದ್ರ ಮೋಹನ್, ಸಂತೋಷ್ ಶೆಟ್ಟಿ ಹಿರಿಯಡಕ, ಉಮೇಶ್ ಕಲ್ಮಾಡಿ, ಸುಧಾಕರ ಆಚಾರ್ಯ ಉಪಸ್ಥಿತರಿದ್ದರು.

Sunday, 26 February 2012

ಮುದ್ರಾಡಿ ರಾಷ್ಟ್ರೀಯ ರಂಗ ಉತ್ಸವಕ್ಕೆ ಚಾಲನೆ

mudradi ranga utsava






ತುಳು ರಾಜ್ಯ ಭಾಷೆಯಾಗಲಿ:ಅಗ್ರಹಾರ ಕೃಷ್ಣಮೂರ್ತಿ
ಹೆಬ್ರಿ, ಫೆ.26: ತುಳುನಾಡಿನ ಸಂಸ್ಕೃತಿ, ಭಾಷೆ ವಿಶಿಷ್ಟ ಮತ್ತು ಐತಿಹಾಸಿಕ. ಮೊದಲು ತುಳು ಭಾಷೆಯನ್ನು ರಾಜ್ಯ ಭಾಷೆಯಾನ್ನಾಗಿ ರಾಜ್ಯ ಸರಕಾರ ಅಂಗೀಕಾರ ಪಡೆಯಬೇಕು. ಮುಂದೆ ದೇಶದ 8ನೇ ಪರೀಚ್ಛೇದಕ್ಕೆ ಸೇರಿಸುವ ಹೋರಾಟಕ್ಕೆ ಬಲ ಬರುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಹೇಳಿದ್ದಾರೆ.ಮುದ್ರಾಡಿ ನಮ ತುಳುವೆರ್ ಕಲಾಸಂಘಟನೆಯ ಆಶ್ರಯದಲ್ಲಿ ಮುದ್ರಾಡಿ ಯ ದಿವ್ಯಸಾಗರ ಬಯಲು ರಂಗಸ್ಥಳದಲ್ಲಿ ಶನಿವಾರ ಆಯೋಜಿಸಲಾದ ಮುದ್ರಾಡಿ ರಾಷ್ಟ್ರೀಯ ರಂಗ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.ಚೆಂಡೆ ಬಾರಿಸುವ ಮೂಲಕ ಉತ್ಸವವನ್ನು ಉದ್ಘಾಟಿಸಿದ ನಟ, ಸಿನೆಮಾ ನಿರ್ದೇಶಕ ಬಿ.ಸುರೇಶ್ ಮಾತನಾಡಿ, ನಮಗೆ ಬೇಕಾದ ಆನಂದ ನಮಗೆ ನಾವೇ ತಂದುಕೊಂಡು ಸಂತೋಷ ಪಡುವುದು ಬಹುಮುಖ್ಯ. ರಾಜ್ಯ ಸರಕಾರ ರಂಗ ಉತ್ಸವಕ್ಕೆ ಅನುದಾನ ನೀಡಿಲ್ಲ ಎನ್ನುವುದು ಮುಖ್ಯವಲ್ಲ. ಇಷ್ಟು ಜನರ ಪೋತ್ಸಾಹ ದೊರೆತಿರುವುದು ವಿಶೇಷ ಎಂದು ಹೇಳಿದರು.ಕಾರ್ಕಳ ಶಾಸಕ ಗೋಪಾಲ ಭಂಡಾರಿ, ಮುಂಬೈ ಉದ್ಯಮಿ ಮುದ್ರಾಡಿ ದಿವಾಕರ ಶೆಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಂಬಾತನಯ ಮುದ್ರಾಡಿ, ಬೆಂಗಳೂರಿನ ಪೊಲೀಸ್ ಅಧಿಕಾರಿ ಕಬ್ಬಿನಾಲೆ ಪ್ರಭಾಕರ ಬಾಯರಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಂಬೈ ಕರ್ನಾಟಕ ಸಂಘದ ಕಾರ್ಯದರ್ಶಿ ಡಾ.ಭರತ್ ಕುಮಾರ್ ಪೊಲಿಪುರನ್ನ್ನು ಸನ್ಮಾನಿಸಲಾಯಿತು.ಜಿಪಂ ಸದಸ್ಯ ಮಂಜುನಾಥ ಪೂಜಾರಿ, ನಮತುಳುವೆರ್ ಕಲಾ ಸಂಘಟನೆ ಯ ಅಧ್ಯಕ್ಷ ಸುಕುಮಾರ್ ಮೋಹನ್, ಧರ್ಮಯೋಗಿ ಮೋಹನ್, ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ಸುಗಂಧಿ ಮೋಹನ್, ರಂಗಕರ್ಮಿ ಜಗದೀಶ ಜಾಲ, ಜಯ ಪ್ರಕಾಶ ಮಾವಿನಕುಳಿ ಮೊದಲಾದವರು ಉಪಸ್ಥಿತ ರಿದ್ದರು. ಬಳಿಕ ಮುಂಬೈ ಕರ್ನಾಟಕ ಸಂಘದ ಡಾ.ಭರತ್ ಕುಮಾರ್ ಪೊಲಿಪು ನಿರ್ದೇಶನದ ‘ಒರಿ ಮಾಸ್ಟ್ರೆನ ಕತೆ’ ತುಳು ನಾಟಕ ಪ್ರದರ್ಶನಗೊಂಡಿತು.

Monday, 20 February 2012

ಫೆ.25ರಿಂದ ‘ಮುದ್ರಾಡಿ ರಾಷ್ಟ್ರೀಯ ರಂಗ ಉತ್ಸವ’






ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆಯ ಆಶ್ರಯದಲ್ಲಿ ಎರಡನೇ ವರ್ಷದ ‘ಮುದ್ರಾಡಿ ರಾಷ್ಟ್ರೀಯ ರಂಗ ಉತ್ಸವ’ವನ್ನು ಫೆ.25ರಿಂದ ಮಾ.4ರವರೆಗೆ ಮುದ್ರಾಡಿಯ ದಿವ್ಯಸಾಗರ ಬಯಲು ರಂಗಸ್ಥಳ ದಲ್ಲಿ ಆಯೋಜಿಸಲಾಗಿದೆ.ಫೆ.25ರಂದು ಸಂಜೆ 6.30ಕ್ಕೆ ಸಿನೆಮಾ ನಿರ್ದೇಶಕ ಬಿ.ಸುರೇಶ್ ಉತ್ಸವವನ್ನು ಉದ್ಘಾಟಿಸಲಿರುವರು. ಅಧ್ಯಕ್ಷತೆ ಯನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ. ಅಗ್ರಹಾರ ಕೃಷ್ಣಮೂರ್ತಿ ವಹಿಸಲಿರುವರು. ಮಾ.4ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ್ ಕಂಬಾರ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಅಧ್ಯಕ್ಷತೆಯನ್ನು ಕಾರ್ಕಳ ಶಾಸಕ ಗೋಪಾಲ ಭಂಡಾರಿ ವಹಿಸಲಿದ್ದಾರೆ. ಫೆ.26ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 5.30ರ ತನಕ ‘ರಂಗ ಪ್ರಯೋಗದ ನೆಲೆಗಳು ಮತ್ತು ಸಾಧ್ಯತೆಗಳು’ ಕುರಿತ ವಿಚಾರ ಸಂಕಿರಣ ನಡೆ ಯಲಿದೆ. ಸುಮಾರು 20ಲಕ್ಷ ರೂ. ವೆಚ್ಚದಲ್ಲಿ ಆಯೋಜಿಸಲಾಗುವ ಈ ಉತ್ಸವಕ್ಕೆ ಉಚಿತ ಪ್ರವೇಶ. ಹತ್ತಿರ ಊರುಗಳಿಗೆ ತಲುಪಲು ರಾತ್ರಿ ಸಂಚಾರದ ವ್ಯವಸ್ಥೆಯನ್ನೂ ಮಾಡಲಾಗಿದೆ.ಫೆ.25ರಂದು ಮುಂಬಯಿಯ ಕರ್ನಾಟಕ ಸಂಘದಿಂದ ‘ಒರಿ ಮಾಸ್ಟ್ರೆನೆ ಕತೆ’ (ತುಳು), 26ರಂದು ಬೆಂಗಳೂರಿನ ಪ್ರಯೋಗ ರಂಗದಿಂದ ‘ಶಿವರಾತ್ರಿ’ (ಕನ್ನಡ), 27ರಂದು ಮುಂಬೈ ಅಭಿನಯ ಮಂಟಪದಿಂದ ‘ಕಾರ್ನಿಕದ ಶನೀಶ್ವರೆ’(ತುಳು), 28ರಂದು ರಂಗಾಯಣ ಮೈಸೂರು ತಂಡದಿಂದ ‘ಏನ್ ಹುಚ್ಚುರೀ ಯಾಕೇ ಹಿಂಗೆ ಆಡ್ತಿರಿ’(ಕನ್ನಡ), ಫೆ.29ರಂದು ‘ಪಾತಾಳ ಭೈರವಿ’(ತೆಲುಗು) ಹಾಗೂ ಮಾ.1ರಂದು ‘ಮಾಯ ಬಜಾರ್’, (ತೆಲುಗು) ಮಾ.2ರಂದು ಮಣಿಪಾಲ ಸಂಗಮ ಕಲಾವಿದೆರ್ ಅವರಿಂದ ‘ಕರ್ಣಭಾರ’(ಕನ್ನಡ), 3ರಂದು ನಮ ತುಳುವೆರ್ ಕಲಾ ಸಂಘಟನೆಯಿಂದ ‘ಪಿಲಿಪತ್ತಿ ಗಡಸ್’(ತುಳು), 4ರಂದು ಕುದ್ರೋಳಿ ಗಣೇಶ್ ಗಣೇಶ್ ತಂಡದಿಂದ ‘ರಂಗ ಜಾದೂ’ ಪ್ರದರ್ಶನ ನಡೆಯಲಿದೆ. ಈ ಎಲ್ಲ ನಾಟಕಗಳು ಪ್ರತಿದಿನ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ.
60 ಕಲಾವಿದರನ್ನೊಳಗೊಂಡ ಸುರಭಿ ತಂಡ
ರಂಗಭೂಮಿಯಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡಿರುವ ಆಂಧ್ರಪ್ರದೇಶದ ಜನಪ್ರಿಯ ಸುರಭಿ ತಂಡವು ಈ ಉತ್ಸವದಲ್ಲಿ ಎರಡು ವಿನೂತನ ತೆಲುಗು ನಾಟಕಗಳನ್ನು ಪ್ರದರ್ಶಿಸಲಿದೆ.ಈವರೆಗೆ ಬೆಂಗಳೂರು ಹಾಗೂ ಮೈಸೂರುಗಳಲ್ಲಿ ಮಾತ್ರ ನಾಟಕ ಪ್ರದರ್ಶನ ಮಾಡಿರುವ 60 ಮಂದಿ ಕಲಾವಿದರನ್ನೊಳಗೊಂಡ ಈ ತಂಡ ಮೊತ್ತ ಮೊದಲ ಬಾರಿ ಎಂಬಂತೆ ಕರಾವಳಿಗೆ ಆಗಮಿಸುತ್ತಿದೆ. ಫೆ.29ರಂದು ‘ಪಾತಾಳ ಭೈರವಿ’ ಹಾಗೂ ಮಾ.1ರಂದು ‘ಮಾಯ ಬಜಾರ್’ ನಾಟಕ ಪ್ರದರ್ಶಿಸಲಿದೆ.