Friday, 22 March 2013




ಇಂದಿನಿಂದ ಮುದ್ರಾಡಿ ರಾಷ್ಟ್ರೀಯ ರಂಗ ಉತ್ಸವ

ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ಆಶ್ರಯದಲ್ಲಿ ಮೂರನೆ ವರ್ಷದ ಮುದ್ರಾಡಿ ರಾಷ್ಟ್ರೀಯ ರಂಗ ಉತ್ಸವವನ್ನು ಮಾ.22ರಿಂದ 27ರವರೆಗೆ ಮುದ್ರಾಡಿ ದಿವ್ಯಸಾಗರ್ ಬಯಲು ರಂಗಸ್ಥಳದಲ್ಲಿ ಹಮ್ಮಿಕೊಳ್ಳಲಾಗಿದೆ.
 22ರಂದು ಮಣಿಪಾಲ ಸಂಗಮ ಕಲಾವಿದೆರ್ ತಂಡದಿಂದ ‘ಸತ್ಯಮೇವ ಜಯತೇ’ ತುಳು ನಾಟಕ, 23ರಂದು ನಮ ತುಳುವೆರ್ ಕಲಾ ಸಂಘಟನೆಯಿಂದ ‘ಮೂರು ಹೆಜ್ಜೆ ಮೂರು ಲೋಕ’ ಕನ್ನಡ ನಾಟಕ, 24ರಂದು ಚೈನ್ನೈ ಮನಲಮಾಗುಡಿ ಥಿಯೇಟರ್ ಲ್ಯಾಂಡ್ ತಂಡದಿಂದ ‘ಸೂರ್ಪನಂಗು’ ತಮಿಳು ನಾಟಕ, 25ರಂದು ಒರಿಸ್ಸಾ ಓಮ್ನಿ ಪ್ಲೇಮ್ ತಂಡದಿಂದ ‘ಶ್ರೀ ಶ್ರೀ ಚಕ್ರ’ ಒರಿಸ್ಸಾ ನಾಟಕ, 26ರಂದು ಸಾಣೇಹಳ್ಳಿ ಶಿವಸಂಚಾರ ತಂಡದಿಂದ ‘ಸೂಳೆ ಸನ್ಯಾಸಿ’ ಕನ್ನಡ ನಾಟಕ ಪ್ರದರ್ಶನಗೊಳ್ಳಲಿವೆ.ಉತ್ಸವವನ್ನು ಬೆಂಗಳೂರಿನ ರಂಗನಟ, ನಿರ್ದೇಶಕ ಶ್ರೀನಿವಾಸ ಪ್ರಭು ಮಾ.22ರಂದು ಸಂಜೆ 6:30ಕ್ಕೆ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ರಂಗ ಸಂಘಟಕ ಶ್ರೀನಿವಾಸ ಕಪ್ಪಣ್ಣ ವಹಿಸಲಿದ್ದಾರೆ. ಪ್ರತಿದಿನ ಸಂಜೆ 6:30ಕ್ಕೆ ನಡೆಯುವ ಸಭಾಕಾರ್ಯಕ್ರಮದ ಬಳಿಕ ನಾಟಕ ಪ್ರದರ್ಶಗೊಳ್ಳಲಿದೆ. 27ರಂದು ಜರಗುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಗೀತ ನಿರ್ದೇಶಕ ಹಂಸಲೇಖ, ಸಂಸದ ಜಯಪ್ರಕಾಶ್ ಹೆಗ್ಡೆ ಭಾಗವಹಿಸಲಿರುವರು.
ಉತ್ಸವದ ಅಂಗವಾಗಿ ಮಾ.24ರಂದು ಬೆಳಗ್ಗೆ 10ಗಂಟೆಗೆ ಕನ್ನಡ, ತುಳು ರಂಗಭೂಮಿಗೆ ಕೊಂಕಣಿ ಭಾಷಿಗರ ಕೊಡುಗೆ ಕುರಿತ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ. ಇದನ್ನು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕಾಸರ ಗೋಡು ಚಿನ್ನಾ ಉದ್ಘಾಟಿಸಲಿರುವರು.