Tuesday, 20 December 2011

ಫೆ.25ರಿಂದ ಬಹುಭಾಷಾ ನಾಟಕೋತ್ಸವ


ನಮ ತುಳುವೆರ್ ಕಲಾ ಸಂಘಟನೆಯ ಆಶ್ರಯದಲ್ಲಿ 2012ರ ಫೆ.25ರಿಂದ ಮಾ.4ರವರೆಗೆ ಮುದ್ರಾಡಿಯಲ್ಲಿ ಹಮ್ಮಿಕೊಂಡಿರುವ 2ನೆ ರಾಷ್ಟ್ರೀಯ ನವರಂಗೋತ್ಸವದಲ್ಲಿ ಬಹುಭಾಷಾ ನಾಟಕೋತ್ಸವ ಜರಗಲಿದೆ.ಈ ನಾಟಕೋತ್ಸವದಲ್ಲಿ ಮುಂಬೈ, ಬೆಂಗಳೂರು ಹಾಗೂ ಒರಿಸ್ಸಾ ರಾಜ್ಯ ದ ನಾಟಕ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸುಕುಮಾರ್ ಮೋಹನ್ ತಿಳಿಸಿದರು.

ಮುದ್ರಾಡಿಯಲ್ಲಿ ‘ನಾಟ್ಕದೂರು’ ನಾಮಕರಣ




ಉಡುಪಿ, ಡಿ.20: ಮುದ್ರಾಡಿ ಗ್ರಾಪಂ ವ್ಯಾಪ್ತಿಯಲ್ಲಿ ನಮ ತುಳುವೆರ್ ಕಲಾ ಸಂಘಟನೆ ಇರುವ ಪ್ರದೇಶಕ್ಕೆ ಗ್ರಾಪಂ ಮೂಲಕ ‘ನಾಟ್ಕದೂರು’ ಎಂದು ಹೆಸರಿಡಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ತಿಳಿಸಿದ್ದಾರೆ.ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮುದ್ರಾಡಿಯಿಂದ ಸುಮಾರು 1 ಕಿ.ಮೀ. ದೂರದಲ್ಲಿರುವ ಈ ನಾಟ್ಕದೂರಿಗೆ ನೆಲ್ಲಿಬೆಟ್ಟು, ಮಾಂತಿಬೆಟ್ಟು, ಉಜೂರು ಪ್ರದೇಶಗಳು ಒಳಗೊಳ್ಳುತ್ತವೆ. ಇಲ್ಲಿ ಸುಮಾರು 50-60 ಕುಟುಂಬಗಳು ವಾಸ ಮಾಡುತ್ತಿವೆ. ನಾಟ್ಕದೂರು ಎಂಬುದಾಗಿ ನಾಮಕರಣಗೊಂಡಿರುವ ರಾಜ್ಯದಲ್ಲೇ ಪ್ರಥಮ ಪ್ರದೇಶ ಇದಾಗಿದೆ ಎಂದು ಹೇಳಿದರು.
ಕಳೆದ 26ವರ್ಷಗಳಿಂದ ನಿರಂತರ ರಂಗ ಚಟುವಟಿಕೆಗಳನ್ನು ಮಾಡುತ್ತ ಬಂದಿರುವ ನಾಟ್ಕ ತಂಡ, ರಂಗ ಸಂವಾದ, ನವರಂಗೋತ್ಸವ, ಮಕ್ಕಳ ನಾಟಕೋತ್ಸವ ಹಾಗೂ ರಾಷ್ಟ್ರೀಯ ನಾಟಕೋತ್ಸವಗಳನ್ನು ಆಯೋಜಿಸುತ್ತಿವೆ ಎಂದ ಅವರು, ಈ ಪ್ರದೇಶಕ್ಕೆ ನಾಟ್ಕದೂರು ಎಂಬುದಾಗಿ ಹೆಸರಿಸಲು ಸಹಕರಿಸಿದ ಕಾರ್ಕಳ ಶಾಸಕ ಗೋಪಾಲ ಭಂಡಾರಿ, ಜಿಪಂ ಸದಸ್ಯ ಮಂಜುನಾಥ ಪೂಜಾರಿ, ಮುದ್ರಾಡಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಬಾಯರಿ ಹಾಗೂ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿ ಸುಧೀಂದ್ರ ಮೋಹನ್, ಸದಸ್ಯ ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.

Sunday, 25 September 2011

ತುಳುವೆರ್ ಕಲಾ ಸಂಘಟನೆ (ರಿ) ಯ ೧೧ನೇ ವರ್ಷದ ನವರಂಗೋತ್ಸವ


ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆ (ರಿ) ತನ್ನ ೨೬ನೇ ವರ್ಷದ ಸಂಭ್ರಮಾಚರಣೆಯಲ್ಲಿ ಖ್ಯಾತ ರಂಗಚಿಂತಕ ಲಿಂಗದೇವರು ಹಳೆಮನೆಯವರ ಸ್ಮರಣಾರ್ಥ ೧೧ನೇ ವರ್ಷದ ನವರಂಗೋತ್ಸವವನ್ನು ೨೦೧೧ರ ಸೆಪ್ಟೆಂಬರ್ ೨೮ರಿಂದ ಅಕ್ಟೋಬರ್ ೦೬ರವರೆಗೆ ಪ್ರತಿದಿನ ರಾತ್ರಿ ೭ ಘಂಟೆಗೆ ಬಿ. ವಿ. ಕಾರಂತ ಬಯಲು ರಂಗಸ್ಥಳದಲ್ಲಿ ನಡೆಸಲಿದೆ.
ಖ್ಯಾತ ಕಿರುತೆರೆ ಧಾರವಾಹಿಗಳ ನಿರ್ದೇಶಕರಾದ ಶ್ರೀ ವಿನು ಬಳಂಜರವರು ನವರಂಗೋತ್ಸವವನ್ನು ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನು ಕಾರ್ಕಳ ಕ್ಷೇತ್ರದ ಶಾಸಕರಾದ ಶ್ರೀ ಗೋಪಾಲ ಭಂಡಾರಿಯವರು ವಹಿಸಲಿದ್ದಾರೆ, ಮುಖ್ಯ ಅಥಿತಿಯಾಗಿ ಬೆಂಗಳೂರಿನ, ಕರ್ನಾಟಕ ರಂಗಪರಿಷತ್ತಿನ ಅಧ್ಯಕ್ಷರಾದ ವಿಟ್ಠಲ ಕೊಪ್ಪದರವರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ಮಣಿಪಾಲದ ಡಾ|| ಹೆಚ್. ಶಾಂತಾರಾಮ್ ರವರು, ಮುಖ್ಯ ಅಥಿತಿಗಳಾಗಿ ದಿವಾಕರ್.ಎನ್. ಶೆಟ್ಟಿ, ಪ್ರಮೋದ್ ಮಧ್ವರಾಜ್ ಹಾಗು ಡಾ|| ರಾಜಾರಾಮ್ ರವರು ಭಾಗವಹಿಸಲಿದ್ದಾರೆ.

ರಾಜ್ಯದ ಹಲವೆಡೆಗಳಿಂದ ವಿವಿಧ ತಂಡಗಳು ನಿತ್ಯವೂ ತಮ್ಮ ನಾಟಕಗಳನ್ನು ಪ್ರದರ್ಶಿಸಲಿವೆ.

೨೮-೦೯-೨೦೧೧ ರಂದು ಬೆಂಗಳೂರಿನ ಸಂಸ(ರಿ) ತಂಡದವರಿಂದ ಸಿ. ಬಸವಲಿಂಗಯ್ಯ ನವರ ನಿರ್ದೇಶನದ "ಕಾತಾಚಿ ಕಥಾರಂಗ", ೨೯-೦೯-೨೦೧೧ ರಂದು ಧಾರವಾಡದ ರಂಗಪರಿಸರ(ರಿ) ತಂಡದವರಿಂದ ವಿಟ್ಠಲ ಕೊಪ್ಪದರವರ ನಿರ್ದೇಶನದ "ಖರೆ ಖರೆ ಸಂಗ್ಯಾ ಬಾಳ್ಯಾ", ೩೦-೦೯-೨೦೧೧ ರಂದು ಬೆಂಗಳೂರಿನ ವಿಜಯಭಾರತಿ ಕಲಾವೃಂದ(ರಿ)ತಂಡದವರಿಂದ ಸತೀಶ್ ಜೋಶಿ ನಿರ್ದೇಶನದ "ಸಮೀಕ್ಷಾ ಒಂದು ಹೆಣ್ಣು", ೦೧-೧೦-೨೦೧೧ ರಂದು ಬೆಂಗಳೂರಿನ ಪಂಚಮುಖಿ ನಟರ ಸಮೂಹ(ರಿ)ತಂಡದವರಿಂದ  ಮಧುಸೂಧನ್ ಕನೇಕಲ್ ನಿರ್ದೇಶನದ "ಕಾಯೋ - ಕಲ್ಪ", ೦೨-೧೦-೨೦೧೧ ರಂದು ಉಡುಪಿಯ ರಥಬೀದಿ ಗೆಳೆಯರು ಮಕ್ಕಳ ತಂಡದಿಂದ ಶ್ರೀಪಾದ ಭಟ್ ನಿರ್ದೇಶನದ "ಪುಷ್ಪರಾಣಿ", ೦೩-೧೦-೨೦೧೧ ರಂದು ಅನೇಕ(ರಿ) ತಂಡದವರಿಂದ ಸುರೇಶ್ ಆನಗಳ್ಳಿ ನಿರ್ದೇಶನದ "ಅಗ್ನಿಲೋಕ", ೦೪-೧೦-೨೦೧೧ ರಂದು ಕುಂದಾಪುರದ ರಂಗಾಧ್ಯಯನ ಕೇಂದ್ರ(ರಿ) ತಂಡದವರಿಂದ ಕಲ್ಲಪ್ಪ ಪೂಜಾರ ನಿರ್ದೇಶನದ "ಕಾಲಯಾತ್ರೆ", ೦೫-೧೦-೨೦೧೧ ರಂದು ನಾಟ್ಕ ಮುದ್ರಾಡಿ(ರಿ) ತಂಡದವರಿಂದ ಶ್ರೀಮತಿ ಸುಗಂಧಿ ಉಮೇಶ್ ಕಲ್ಮಾಡಿ ನಿರ್ದೇಶನದ "ಕೋರ್ಟ್ ಮಾರ್ಷಲ್" ಹಾಗು ಕೊನೆಯ ದಿನವಾದ ೦೬-೧೦-೨೦೧೧ ರಂದು ಅಜೆಕಾರಿನ ಶ್ರೀ ಮೂಕಾಂಬಿಕ ಯಕ್ಷಕಲಾ ಮಂಡಳಿ(ರಿ) ತಂಡದವರಿಂದ "ಶ್ರೀದೇವಿ ಮಹಾತ್ಮೆ" ಯಕ್ಷಗಾನ ಪ್ರದರ್ಶನ ನಡೆಯಲಿದೆ

ಶ್ರೀ ಕ್ಷೇತ್ರ ಮುದ್ರಾದಿಯಲ್ಲಿ ೪೦ನೇ ವರ್ಷದ ಶರನ್ನವರಾತ್ರಿ ಉತ್ಸವ



ಶ್ರೀ ಕ್ಷೇತ್ರ ಆದಿಶಕ್ತಿ ದೇವಸ್ಥಾನ ಬ್ರಹ್ಮಬೈದರ್ಕಳ ಗರಡಿ ಮುದ್ರಾಡಿಯ ೪೦ನೇ ವರ್ಷದ "ಶರನ್ನವ ರಾತ್ರಿ ಉತ್ಸವ" ದಿನಾಂಕ ೨೭-೦೯-೨೦೧೧ ರಂದು ಏಕಾಹ ಭಜನೆಯ ಮುಖೇನ ಪ್ರಾರಂಭಗೊಂಡು ದಿನಾಂಕ ೦೭-೧೦-೨೦೧೧ ರ ಸೂರ್ಯೋದಯದವರೆಗೆ ಜರುಗಲಿದೆ.

ದಿನಾಂಕ ೨೮-೦೯-೨೦೧೧ ರಿಂದ ಶ್ರೀ ಕ್ಷೇತ್ರದಲ್ಲಿ ಪ್ರತಿ ದಿನ ಬೆಳಿಗ್ಗೆ ೬.೧೫ ರಿಂದ "ಮಹಾಚಂಡಿಕಾಯಾಗ" ೯ ದಿನಗಳ ಕಾಲ ನಡೆಯಲಿದೆ,
                        ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

Tuesday, 23 August 2011

"ಪಾಠನಾಟಕ" ತರಬೇತಿ ಶಿಬಿರ





  ಉಡುಪಿ; ಕರ್ನಾಟಕ ನಾಟಕ ಅಕಾಡೆಮಿ, ನಮತುಳುವೆರ್ ಕಲಾ ಸಂಘಟನೆ ಮುದ್ರಾಡಿ ಇದರ ಆಶ್ರಯದಲ್ಲಿ ಮುದ್ರಾಡಿಯ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯ ಕನ್ನಡ ಸಂಘದ ವಿದ್ಯಾರ್ಥಿಗಳಿಗೆ "ಪಾಠನಾಟಕ" ತರಬೇತಿ ಶಿಬಿರವು ಮುದ್ರಾಡಿಯಲ್ಲಿ ನಡೆಯಿತು.
 ಮುದ್ರಾಡಿಯ ನಮತುಳುವೆರ್ ಕಲಾ ಸಂಘಟನೆ ಯ ನೇತೃತ್ವದಲ್ಲಿ ಈ ವಿದ್ಯಾರ್ಥಿಗಳು ಇದೇ ತಿಂಗಳ ಕೊನೇ ವಾರದಲ್ಲಿ ಉಡುಪಿ ಜಿಲ್ಲೆಯಾದ್ಯಂತ "ಶಾಲೆಯತ್ತ ರಂಗಭೂಮಿ-ಉಡುಪಿ ಜಿಲ್ಲಾ ಜಾಥಾ" ಹಮ್ಮಿಕೊಂಡಿದ್ದು ಜಿಲ್ಲೆಯ ಪ್ರೌಢಶಾಲೆಗಳಲ್ಲಿ ನಾಟಕ ಪ್ರದರ್ಶನವನ್ನು ನೀಡಲಿದೆ. ರಂಗಕರ್ಮಿ ಐಕೆ ಬೊಳುವಾರು ರವರು ರಂಗರೂಪಕ್ಕಿಳಿಸಿದ ಎಂಟರಿಂದ ಹತ್ತನೇ ತರಗತಿವರೆಗಿನ ಆಯ್ದ ಕನ್ನಡ ಪಾಠ ಹಾಗೂ ಪದ್ಯಗಳನ್ನು ರಂಗಕೃತಿಯಾಗಿಸಿಕೊಂಡು ಪುತ್ತೂರಿನ ರಂಗ ನಿರ್ದೇಶಕ ಮೌನೇಶ್ ವಿಶ್ವಕರ್ಮ ನಾಟಕವನ್ನು ಸಿದ್ದಪಡಿಸುತ್ತಿದ್ದಾರೆ. ಶಾಲಾ ಸಂಚಾಲಕ ದಿವಾಕರ ಎನ್.ಶೆಟ್ಟಿ, ತಾ.ಪಂ.ಅಧ್ಯಕ್ಷ ಮಂಜುನಾಥ ಪೂಜಾರಿ, ಸಾಹಿತಿ ಅಂಬಾತನಯ ಮುದ್ರಾಡಿ, ಗ್ರಾ.ಪಂ.ಅಧ್ಯಕ್ಷರಾದ ಸದಾಶಿವ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ, ಶಿಕ್ಷಕ ಪಿ.ವಿ.ಆನಂದ್ ಸಾಲಿಗ್ರಾಮ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ನಾಟ್ಕ ಮುದ್ರಾಡಿ ಇದರ ಅಧ್ಯಕ್ಷರಾದ ಸುಕುಮಾರ್ ಮೋಹನ್, ಕಾರ್ಯದರ್ಶಿ ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ನಿರ್ದೇಶಕ ಮೌನೇಶ್ ವಿಶ್ವಕರ್ಮ ಉಪಸ್ಥಿತರಿದ್ದರು.

Thursday, 4 August 2011

ನಾಟ್ಕಾಸ್ ನಾಟಕೋತ್ಸವ

‘ಕಾರ್ಕಳ, ಆ.4: ಕರ್ನಾಟಕ ನಾಟಕ ಅಕಾಡಮಿಯ ಸಹಯೋಗದೊಂದಿಗೆ ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆ, ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ರಾಮಕೃಷ್ಣ ಸಭಾಭವನ ದಲ್ಲಿ ಒಂದು ವಾರ ಕಾಲ ಆಯೋಜಿಸಿದ ನಾಟ್ಕಾಸ್’ ನಾಟಕೋತ್ಸವಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.

ನಗಾರಿ ಬಾರಿಸುವ ಮೂಲಕ ನಾಟಕೋತ್ಸವವನ್ನು ಉದ್ಘಾಟಿಸಿದ ಕಾರ್ಕಳ ಶಾಸ್ತ್ರೀಯ ಸಂಗೀತ ಸಭಾದ ಅಧ್ಯಕ್ಷ ನಿತ್ಯಾನಂದ ಪೈ ಮಾತನಾಡಿ, ಈ ಕಾಲದ ಜನರ ಪ್ರತಿಯೊಂದು ವರ್ತನೆಯೂ ನಾಟಕದಂತೆಯೆ ಭಾಸವಾಗುತ್ತದೆ. ಇಂದಿನವರಿಗೆ ನಾಟಕದಲ್ಲಿ ಆಸಕ್ತಿ ಕಡಿಮೆಯಾಗಲು ಇದೂ ಒಂದು ಕಾರಣವಿರಬಹುದೆಂದು ಅಭಿಪ್ರಾಯಪಟ್ಟರು.



‘‘ಕಾಲೇಜಿನ ಪ್ರಾಧ್ಯಾಪಕ ಡಾ.ಜಯಪ್ರಾಕಾಶ್ ಮಾವಿನಕುಳಿ ಕಾರ್ಯಕ್ರಮ ನಿರ್ವಹಿಸಿದರು. ನಾಟಕೋತ್ಸವದ ಮೊದಲ ದಿನದಂದು ಬೆಂಗಳೂರಿನ ಅನಾವರಣ ತಂಡ, ಡಾ.ರಾಜಪ್ಪದಳವಾಯಿ ವಿರಚಿತ ಒಂದು ಬೊಗಸೆ ನೀರು’ ಎಂಬ ಸಾಮಾಜಿಕ ನಾಟಕ ವನ್ನು ಹು.ದಾ.ಮುತ್ತುರಾಜರ ನಿರ್ದೇಶನದಲ್ಲಿ ಪ್ರದರ್ಶಿಸಿದರು. ನಾಟಕೋತ್ಸವದ ಎರಡನೆಯ ದಿನ ಉಡುಪಿಯರಥಬೀದಿ ಗೆಳೆಯರು ಸಾದತ್ ಹುಸೇನ್ ಮಾಂಟೋನ ಮಿಷ್ಟೇಕ್’ ನಾಟಕವನ್ನು ಶ್ರೀಪಾದ್ ಭಟ್‌ರ ನಿರ್ದೇಶನದಲ್ಲಿ ಪ್ರದರ್ಶಿಸಿತು.

Monday, 2 May 2011

ಶ್ರೀಮತಿ ಉಮಾಶ್ರೀಯವರಿಗೆ ಮುದ್ರಾಡಿ ನಾಟ್ಕ ಸಂಮಾನ

 ಮುದ್ರಾಡಿ : ಖ್ಯಾತ ಸಾಂಸ್ಕೃತಿಕ ಸಂಘಟನೆ ನಮತುಳುವೆರ್ ಕಲಾ ಸಂಘಟನೆ (ನಾಟ್ಕ) ಮುದ್ರಾಡಿ ಸಂಸ್ಥೆ, ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಸಂಸ್ಥೆಯ ಬೆಳ್ಳಿಹಬ್ಬದ ಸವಿನೆನಪಿಗಾಗಿ ಪ್ರಾರಂಭಿಸಿರುವ, ಪ್ರಶಸ್ತಿ ಪತ್ರ, ರೂ 25,000 ನಗದು ಒಳಗೊಂಡ ಮುದ್ರಾಡಿ ನಾಟ್ಕ ಸಂಮಾನ ರಾಷ್ಟ್ರೀಯ ಪ್ರಶಸ್ತಿಯನ್ನು ರಂಗ ಕಲಾವಿದೆ ಶ್ರೀಮತಿ ಉಮಾಶ್ರೀಯವರ ಜೀವಮಾನದ ಂಗಭೂಮಿಯ ಸಾಧನೆಯನ್ನು ಗಮನಿಸಿ ನೀಡಿ ಗೌರವಿಸಲಾಯಿತು
   ಪ್ರಶಸ್ತಿ ಪ್ರದಾನ ಸಮಾರಂಭ ವಿಶ್ಷರಂಗಭೂಮಿ ದಿನ ಮಾರ್ಚ್ 27 ಭಾನುವಾರ ಸಂಜೆ ಗಂಟೆ 7ಕ್ಕೆ ಮುದ್ರಾಡಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ರಂಗಮಂಟಪದಲ್ಲಿ ಜರಗಿದ ಈ ಸಮಾರಂಭದಲ್ಲಿ ನಾಡಿನ ಹಿರಿಯ ರಂಗಚೇತನ ನಾಡೋಜ ಡಾ ಎಣಗಿ ಬಾಳಪ್ಪ ಇವರು ಉಮಾಶ್ರೀಯವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು ಅತಿಥಿಗಳಾಗಿ ಖ್ಯಾತ ಸಂಗೀತಜ್ಞ ಈ ಬಾರಿಯ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಶ್ರೀ ಗುರುರಾಜ್ ಮಾರ್ಪಳ್ಳಿ ಆಗಮಿಸಿದ್ದರು. ಸಮಾರಂಭ ಅಧ್ಯಕ್ಷತೆಯನ್ನು ಕಾರ್ಕಳ ಕ್ಷೇತ್ರದ ಶಾಸಕ ಶ್ರೀ ಎಚ್ ಗೋಪಾಲ್ ಭಂಡಾರಿ ವಹಿಸಿದ್ದರು. ಸಮಾರಂಭದ ನಂತರ ನಾಟ್ಕ (ರಿ) ಕಲಾವಿದರಿಂದ ಅಸುದ್ದೋ (ಮೂಲ ಕಥೆ: ಪ್ರಭಾಕರ್ ಶಿಶಿಲ, ರಂಗರೂಪ: ಸುಕುಮಾರ್ ಮೋಹನ್, ನಿರ್ದೇಶನ: ಸುಧೀಂದ್ರ ಮೋಹನ್) ತುಳು ನಾಟಕ ಪ್ರದರ್ಶನ ಜರಗಿತು.
   ಮುದ್ರಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಜರಗಿದ ಈ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಗ್ರಾಮೀಣ ನಾಟಕ ಸಂಘಟನೆಯ ರಾಷ್ಟ್ರೀಯ ಪ್ರಶಸ್ತಿ ಎರಡೂ ಕೂಡಾ ರಂಗಭೂಮಿಯ ಇತಿಹಾಸದಲ್ಲಿ ದಾಖಲಾರ್ಹ ಸಂಗತಿ. ಸಮಾರಂಭದ ಯಶಸ್ಸಿಗೆ ಕಾರಣರಾದ ಮುದ್ರಾಡಿ ನಾಗರಿಕರಿಗೆ ನಾಟ್ಕ ಅಧ್ಯಕ್ಷ ಶ್ರೀ ಸುಕುಮಾರ್ ಮೋಹನ್ ಕೃತಜ್ಞ ತೆ ತಿಳಿಸಿದ್ದಾರೆ.